Showing posts with label ಇತ್ಯಾದಿ... Show all posts
Showing posts with label ಇತ್ಯಾದಿ... Show all posts

Thursday, August 4, 2016

ಕಾಲ ಗರ್ಭದಲಿ...

ಊರ ತೊರೆದ ಮಗನ
ಕಡೆವರೆಗೂ ಅದೇ ಪ್ರೀತಿಯಲಿ
ಕಾಯೋ ಕಣ್ಣು ಅಮ್ಮನದು..
ತೊರೆದ ಮಗನ ಹಿತವ ಬಯಸಿ
ನೂರಾರು ದೇವರುಗಳ ಹರಕೆ
ತೀರಿಸುತಲೇ, ಸಾಗುತಿರುವ ಬದುಕು ಅವಳದು..
ಆದರೂ ಇದ ಅರಿಯದ ಮಗ ಸಾಗುತಿರುವನೋ
ಅರಿತು ಕೂಡ ಮರೆತು ಸಾಗುತಿಹನೊ
ತಿಳಿಯದು ಬದುಕಲಿ..

ಸಿಗದ  ಒಲವ  ಇನ್ನೆಲ್ಲೋ
ಕಾಣುವ ಜಿಜ್ಞಾಸೆ ಪ್ರತಿ ಪ್ರೇಮಿಗಳದ್ದು..
ತೊರೆದ ಕ್ಷಣಕೆ ಏನೇನೋ ಕಾರಣ
ತಾವೆ ಕಟ್ಟಿಕೊಳ್ಳುತ ,ಎಂದಿಗೂ
ದೂಷಿಸದ ಪ್ರೇಮ ಇವರದು..
ಆದರೂ, ಇದ ಅರಿಯದೆ
ಹುಡುಗಿ ಕಳೆದುಕೊಂಡಳೊ,.?
ಸಿಗದ ಹುಡುಗ ಕಳೆದುಕೊಂಡನೊ,
ಒಟ್ಟಾರೆ ಸಿಗದಿದ್ದೆ ಜಾಸ್ತಿ ಬದುಕಲಿ...

ಏನೆನೋ ಹುಡುಕುವ
ಏನೆನೋ ಪಡೆದುಕೊಳ್ಳುವ ಧಾವಂತದಿ
ಕಳೆದುಕೊಳ್ಳುತಲೇ ಸಾಗುವ
ಏನೋ ಪಡೆದವೆಂದು ಹಿಗ್ಗುವ
ಲೆಕ್ಕಾಚಾರದ ಬದುಕಿಗೆ
ತಿಳಿಯದು ಸಾಗುವ ಹಾದಿಯಲಿ
ಕಳೆದುಕೊಂಡುದರ ಲೆಕ್ಕ...

ಇಳಿ ಸಂಜೆಯಲಿ ಕೂತು
ಕಳೆದುಕೊಂಡ  ಒಲವಿನ ಅವಲೋಕನ..
ಗೋಡೆ ಮೇಲಿನ ಅಮ್ಮನ ಫೋಟೋ ನೋಡಿ
ಅವಳ ಬದುಕ ಸ್ಮರಿಸುವ  ಆತ್ಮಾವಲೋಕನ
ಎರಡು ಶೂನ್ಯ ಕಾಲ ಗರ್ಭದಲಿ....


......ರಾಮೇನಹಳ್ಳಿ ಜಗನ್ನಾಥ

Tuesday, June 28, 2016

ನೆನಪೆ ಆಗುವುದಿಲ್ಲ..?!

ಹೆಂಡತಿಯ ಕಾಲಿಗೆ ಶೀತವೆಂದು
ಬೇರೆ ಚಪ್ಪಲಿಯ ಕೊಡಿಸುವ ನಮಗೆ
ಅಪ್ಪನ ಬರಿಗಾಲಿಗೆ ಚುಚ್ಚಿದ ಮುಳ್ಳು
ನೆನಪೆ ಆಗುವುದಿಲ್ಲ...

ತಮ್ಮ ವಿವಾಹ ಮಹೋತ್ಸವಕೆ
ಚಿನ್ನದ ಉಡುಗರೆ ಹೆಂಡತಿಗೆ
ಕೊಡುವಾಗಲೂ, ಅಮ್ಮನ ಕರಿಮಣಿ ಸರ
ನೆನಪೆ ಆಗುವುದಿಲ್ಲ...

ಸಮಯಕ್ಕೆ ಸರಿಯಾಗಿ ಹೋಗದಿದ್ದರೆ
ಹೆಂಡತಿ ಒಬ್ಬಳೆ ಮನೆಯಲಿ ಇರುವಳು
ಎಂದು ಮರುಗುವ ನಮಗೆ
ಅಮ್ಮ ಒಬ್ಬಳೆ ಕಾದ ದಿನಗಳ್ಯಾವು
ನೆನಪೆ ಆಗುವುದಿಲ್ಲ...

ಸ್ನೇಹಿತರಿಗೆ, ಪಕ್ಕದ ಮನೆಯವರಿಗೆ
ಹೀಗೆ ಎಲ್ಲರಿಗೂ ಏನೆಲ್ಲ ಉಡುಗರೆ
ಕೊಡುವ ನಮಗೆ..
"ಏನೆಲ್ಲ ಕೊಡಿಸುವವೆಂದು"
ಚಿಕ್ಕಂದಿನಲ್ಲಿ ಆಡಿದ ಮಾತುಗಳು ನಮಗೆ
ನೆನಪೆ ಆಗುವುದಿಲ್ಲ...
ಆದರೆ,
ಅದೆ ಮಾತನ್ನು ಇಂದಿಗೂ
ನೆನೆ-ನೆನೆದು ಖುಷಿ ಪಡುವುದ
ಅಮ್ಮ ಬಿಡುವುದೇ ಇಲ್ಲ...

-----ರಾಮೇನಹಳ್ಳಿ ಜಗನ್ನಾಥ

Saturday, August 9, 2014

ಮಡಿಲು...

ಕವಿತೆ ಹುಟ್ಟುವ
ಪ್ರತಿ ಸಮಯದಲೂ
ನಿನ್ನ ನೆನಪಿನ ಆಣಿಕಲ್ಲ(ಆಲಿಕಲ್ಲು) ಮಳೆ ಜೋರಿದೆ..
ನೆನಪ ಮೆಟ್ಟಿ ಹೊರ ಬರುವ
ಪ್ರತಿ ಯತ್ನದಲ್ಲೂ ಸೋಲಿದೆ..
ಸೋಲೋ -ಗೆಲುವೋ ತರ್ಕಗಳಿಗೆ
ಇಳಿಯದ ಮನಸಿನ ಜೊತೆಯಾಗಿ
ಶರಾಬಿದೆ...
ಕಟ್ಟಿಗೆಯೇ ಇರದೆ
ಅಲೆಮಾರಿ ಎದೆ ಉರಿಯುತಿದೆ..
ಮತ್ತೆ-ಮತ್ತೆ ಸಾಲು-ಸಾಲು
ಕವಿತೆ ಕಟ್ಟುತಿದೆ..
ಅಲಮಾರಿನ ತುಂಬ ನೀ ಕೊಟ್ಟ
ಉಡುಗೊರೆಯ ಗೊಂಚಲಿದೆ..
ಅದ ನೋಡುತ ಇಡಿ ರಾತ್ರಿ
ಗೀಳಿಟ್ಟ ಅದೆಷ್ಟೋ ದಿನಗಳಿವೆ..
ಇಂತ ಕ್ಷಣಗಳಲಿ ಜೊತೆಯಾಗಿ
ನನ್ನೊಡನೆ ತಾಯಿ ಮಡಿಲಿದೆ...

-----ರಾಮೇನಹಳ್ಳಿ ಜಗನ್ನಾಥ


Monday, April 7, 2014

(ಅ)ರಾಜಕೀಯ...


ಕೈ-ಕಮಲ ತೃಣಮೂಲ
ಹುಡುಕ್ ಬೇಡಿ ಉಳಿದೋರ್ ಮೂಲ
ನೂರಾರು ಪಾರ್ಟಿಗಳು ದೇಶದಗಲ
ಮೇವು ಮೇದೋರ ಬಾಯಲ್ಲು ವೇದಾಂತ
ಹೊರೆ ಹೊತ್ತೋರ ಬಾಯಲ್ಲು ಸಿದ್ಧಾಂತ
ಇನ್ನ ಸಿಟಿ ತುಂಬ ಸ್ಟ್ಯಾಚುಗಳದ್ದೇ ರಾದ್ಧಾಂತ....
ಯೂತ್ ಲೀಡರ್ ಎಂಪವರ್ ಮೆಂಟು
ಅಪ್ಪ-ಮಕ್ಕಳ ಸೆಂಟಿಮೆಂಟು
ಸಂಘದೋರ ಸ್ಟೇಟ್ ಮೆಂಟು
ಉಳಿದೋರ ಸೆಟಲ್ ಮೆಂಟು
ಅಮ್ಮ ಕೂಡ ಪಿ.ಎಮ್ ಕ್ಯಾಂಡಿಡೇಟು..!
ಬ್ಯುಸಿ-ಬ್ಯುಸಿ ಮೋದಿ ಡೇಟು
ಒಟ್ಟಾರೆ ಬರ್ಲಿ ಒಳ್ಳೇ ಗವರ್ನಮೆಂಟು...
2ಜಿ ರಾಜ ರಾಬಟ್ ವಾದ್ರಾ
ಡಿ.ಕೆ ಬ್ರದರ್ಸ್ ರೆಡ್ಡಿ ಬ್ರದರ್ಸ್ ಎಟ್ಸಟ್ರಾ..ಎಟ್ಸಟ್ರಾ..
ನೋಡಿ ನೋಡಿ ಸಾಕಾಗೋಗಿ
ಪೊರಕೆ ಹಿಡಿದ ಕೇಜ್ರಿನೂ ಗೆಲ್ಲಿಸಿದ್ದಾಯ್ತು ಡೆಲ್ಲಿಯಲ್ಲಿ
ಅದ್ರೆ..! ಕ್ರೇಜು ನೋಡಿ ಗೆಲ್ಲುಸ್ ಬಿಟ್ರಲ್ಲ ನಮ್ಮ ಮಂಡ್ಯದಲ್ಲಿ..
ವಸಿ ನೋಡ್ಕಂಡು ವತ್ರಣ್ಣ ಒಳ್ಳೇರ್ಗೇ ಇರೋರಲ್ಲಿ..

---ರಾಮೇನಹಳ್ಳಿ ಜಗನ್ನಾಥ

Tuesday, February 11, 2014

ಒಂದಿಷ್ಟು ಗೊಂದಲದ ಪ್ರಶ್ನೆಗಳು



ಬದುಕಬೇಕಿದೆ ಕೇವಲ
ಈ ಭೂಮಿಯ ಮೇಲೆ  ಹುಟ್ಟಿದ್ದಕ್ಕಾಗಿ
ಕಾರಣ,
ಈ ಬದುಕಿನಲ್ಲಿನ ಶ್ರೇಷ್ಠತೆಗಳು, ನಂಬಿಕೆಗಳು ಇತ್ಯಾದಿ..ಇತ್ಯಾದಿ..
ಯಾವುದನೂ ಸರಿಯಾಗಿ ಗುರುತಿಸಲಾರದ
ವಾತಾವರಣವೇ ಇಲ್ಲದಿರುವಾಗ
ಬದುಕಿನ ಸಾರ್ಥಕತೆಯ ಬಗ್ಗೆ
ಗೊಂದಲಗಳು ತಳವೂರಿವೆ...

ಸರಿ-ತಪ್ಪುಗಳ್ಯಾವುದೆಂದು
ಸರಿಯಾಗಿ ಅರ್ಥವೇ ಆಗದೆ,
ಅವರವರ ದೃಷ್ಠಿಕೋನಗಳಿಗಿಲ್ಲಿ
ತಪ್ಪುಗಳು ಸರಿಯಾಗಿ ಬದಲಾಗಿವೆ
ತಪ್ಪು ಈಗ ತಪ್ಪಾಗೆ ಉಳಿದಿಲ್ಲ
ಒಟ್ಟಾರೆ ಸಾಗುತಿದೆ ಗೊಂದಲದಲೇ ಬದುಕು..

ಸತ್ಯವೆಂತು ಹಾಸ್ಯಾಸ್ಫದವಾಗಿ
ಹರಿಶ್ಚಂದ್ರನ ಉದಾಹರಣೆ
ಹೊಗಳಿಕೆಗೋ-ತೆಗಳಿಕೆಗೋ
ತಿಳಿಯದಾಗಿದೆ...
ವಿಜ್ಞಾನಿಗಳ ಶ್ರಮ ಫಲಪ್ರದವಾದರೆ
ಸ್ವಚ್ಚಂದ ಬದುಕ ಕಟ್ಟಿಕೊಳ್ಳಬಹದಾ..?
ಮಂಗಳ ಗ್ರಹದಲ್ಲಿ..?

            

--ರಾಮೇನಹಳ್ಳಿ ಜಗನ್ನಾಥ

Thursday, August 8, 2013

ಬರಬಾರದ ಮತ್ತೆ..

ಕೊರಗುತ್ತಲೇ ಇದ್ದಾಳೆ
ಕನಲುತ್ತಲೇ ಇದ್ದಾಳೆ
ಅವಳು ಅಂದಿನಿಂದಲೂ
ಅವ ಯಾರೋ ಏನೋ ಒಮ್ಮೆಯೂ
ಎಲ್ಲಿಯೂ ಕಂಡವನಲ್ಲ ಎಂದೂ
ಮೊದ-ಮೊದಲು ಮಾಮೂಲಿಯಂತೆ
ಇದ್ದವಳು..

ಕ್ಷಣದಲ್ಲೇ..!
ತನು-ಮನವ ಮನಃಪೂರ್ತಿ
ಒಪ್ಪಿಸಿಕೊಂಡಳು
ಅವನು ಬಂದಾಗ ಅಂದು.
ವಿಧುರನೋ ವಿಲಾಸಿಯೋ ಕಾಣೆ
ಒಟ್ಟಾರೆ ಬಂದವ ಅಂದು
ಇಂದಿಗೂ ಈ ಬೀದಿಗೆ ನಾಪತ್ತೆ
ಅಂದಿನಿಂದಲೂ ಬಂದವರೆಷ್ಟೋ
ಹೋದವರೆಷ್ಟೋ ಇವನಂತಹ
ಗಿರಾಕಿಗಳು ಮತ್ತೆ-ಮತ್ತೆ

ಆದರೆ,
ಅವನೇಕೆ ಹಾಗೆ.?
ಮನದಲ್ಲಿ ಉಳಿದುಕೊಂಡಿಹನು
ಎಂದುಕೊಡಿರುವಿರಾ ನೀವು

ಈ ಪ್ರೀತಿ ಹೆಸರಲ್ಲಿ ಉಳಿಸಿಹನಲ್ಲ
ನನ್ನವನೊಬ್ಬ ಇಂದಿಗೂ ನೋವು
ಅವನಂತಯೇ ಕಂಡಿದ್ದ ಆತ
ಕ್ಷಣಿಕದಲ್ಲೇ ಹಳೆತಲ್ಲ ಮರತೆ
ಅವನಲ್ಲಿ ಬೆರೆತೆ..

ನಂತರದಿ ನೆನಪಾದಾಗ ವಾಸ್ತವ
ನಿದ್ದೆ ಮಂಪರಿನಲ್ಲಿ
ನಾ ಎದ್ದು ನೋಡುವಷ್ಟರಲ್ಲಿ
ಅವನಾಗಿದ್ದ ಮರೆ ಮತ್ತೆ ಹೆಚ್ಚಿಸಿ
ನನ್ನ ನೋವಿನ ಹೊರೆ..

ಅದೇಕೋ,
ಎಂದೂ ಯಾರೂ ನೀಡದಷ್ಟು ಗರಿ-ಗರಿ ನೋಟುಗಳು
ತಲೆದಿಂಬಿನಡಿಯಲ್ಲಿ ಇಣಕಿ ನೋಡುತ್ತಿದ್ದವು
ಇಷ್ಟೇ-ಇಷ್ಟೇ ನಿನ್ನ ಬೆಲೆಯೆಂದು..!

ಅವನಾಗಿದ್ದರೆ ನನ್ನ ಕಂಡಾಗ
ಗುರುತು ಸಿಕ್ಕಿತೋ ಇಲ್ಲ
ಗುರುತು ಸಿಕ್ಕಿಯೂ ಸಿಕ್ಕದವನಂತೆ
ನಟಿಸಿದನೋ..

ಅದೆಲ್ಲಿ ಅರ್ಥವಾಗಬೇಕು ಹೇಳಿ
ಬಂದವರೆಲ್ಲಾ ನನ್ನ ಬಗ್ಗೆ ವಿಚಾರಿಸುತ್ತಾರೆಯೇ..?
ನಾ ಅವರನ್ನು ಅರಿಯಲು.
ಬಂದವರು ತಮ್ಮ-ತಮ್ಮ ಇಷ್ಟಾರ್ಥಗಳ
ಹೊಂದುವ ಬಯಕೆಯಲಿ
ತೋರುವರು ಆತುರ ಅಲ್ಲವೇ..?

ಇರಲಿರಲಿ ಬಿಡಿ
ಬರುವ ಗಿರಾಕಿಗಳ ಬಗ್ಗೆಯೇಕೆ ಕೊಂಕುಮಾತು
ಆದರೂ ಅವನ್ಯಾರು
ಒಮ್ಮೆಯಾದರೂ ಹಿಂದುರಿಗಿ ಬರಬಾರದೇ
ಈ ಬೀದಿಗೆ ಮತ್ತೆ..

--------ರಾಮೇನಹಳ್ಲಿ ಜಗನ್ನಾಥ
ಕಲೆ--ಲಕ್ಷ್ಮಣ ಕಲ್ಯಾಣಿ
(ಈ ಕವನ ಸುಮಾರು 8 ವರ್ಷಗಳ ಹಿಂದೆ ಬರೆದದ್ದು..)



Saturday, August 3, 2013

ಎರಡು ಪ್ರಾಣಿಗಳು..

ಇಲ್ಲೊಂದು  ಪ್ರಾಣಿಯ
 ತುಂಬ
ಕಿಚ್ಚು ತುಂಬಿದೆ..
ಇನ್ನೊಂದು ಪ್ರಾಣಿಯ
ತುಂಬಾ ಹೊಟ್ಟೆಕಿಚ್ಚಿದೆ..

-----ರಾಮೇನಹಳ್ಳಿ ಜಗನ್ನಾಥ

Thursday, May 9, 2013

ರೇಖಾಚಿತ್ರ..


ಹೇ ಹುಡುಗ,                                                 
ಯಾವ ಸುಳಿವನು ನೀಡದೆ
ಕನಸಲಿ ಬಂದ ನಿನಗೆ
ಇರಬಾರದೇ ಚೂರಾದರು ಅಳುಕು..?
ಅನುಮತಿ ಕೇಳದೆ
ಮುತ್ತನು ನೀಡಿದೆ..
ಇತಿ-ಮಿತಿ ಇಲ್ಲದೆ
ಅತಿಕ್ರಮ ಮಾಡಿದೆ..
ಆ ನಿನ್ನ ರಭಸ ನೋಡಿ
ಆಗೋದೆ ಬೆಪ್ಪುತಕಡಿ..
ಈ ತುಟಿಯ ಗಾಯ ನೋಡಿ
ಚೂರಾಯ್ತು ಹೊಸ ಕನ್ನಡಿ..
ಇಡಿ ರಾತ್ರಿ ನೀ ಬಿಡಿಸಿದೆ
ರೇಖಾಚಿತ್ರವ
ಮುನ್ನುಡಿಯಲು-ಬೆನ್ನುಡಿಯಲು..
ಒಂದೊಂದು ಜಾಗದಿ
ಹೊಸಬಗೆಯ ಬೇಗುದಿ
ಆ ನಿನ್ನ ಸ್ಪರ್ಶದಿ ..
ಅಹಾ..! ಒಮ್ಮೊಮ್ಮೆ
ಅದು ಪುಳಕ
ಮೈಯ್ಯಲ್ಲಾ ನಡುಕ
ಒಟ್ಟಾರೆ ಸಿಹಿ ನರಕ...

-----ರಾಮೇನಹಳ್ಳಿ ಜಗನ್ನಾಥ


Wednesday, January 30, 2013

ಕೆಂಪು ದೀಪದಲ್ಲೊಂದು ಅಳಲು



ಇಲ್ಲಿ ಎಲ್ಲವೂ
ಕಳೆದು ಹೋದ ಮುಖಗಳೇ
ಎನೋ ನೆನೆಯುವವು.
ಯಾಕೋ ನಲಿಯುವವು
ಸುಮ್ಮನೆ ಕುಳಿತು ಕಳೆಯುತ್ತಿದ್ದರೆ ಕಾಲ
ಮಾಲೀಕಳ ಗದರಿಕೆಗೆ ಎಚ್ಚರವಾಗಿ
ಬೀರುವವು ವ್ಯವಹಾರಿಕ
ನಸು-ನಗೆ
ವಿವಿಧ ಬಗೆ
ಬರುವ ಗಿರಾಕಿಗಳಿಗೆ...

ಬಯಲಾಗಿ ಇಟ್ಟಿರುವ ದೇಹಕ್ಕೆ ಸಿಕ್ಕಾಗ ವಿರಾಮ
ಮುಂದುವರೆಯುವುದು ಮಂಥನ
ಮತ್ತದೆ ಪ್ರಶ್ನೆಗಳಿಗೆ
ಇಟ್ಟಿದ್ದ ಕಾಮಾ,

ಗಂಡ, ಮಕ್ಕಳು, ಸಂಸಾರ, ಸಿನಿಮಾ, ಸುತ್ತಾಟ
ಎಲ್ಲವೂ ತನ್ನ ವಾರಿಗೆ ಗೆಳತಿಯರ
ಬದುಕು ನೆನೆದಾಗ
ಲಗ್ಗೆಯಿಡುವ ಪ್ರಶ್ನೆಗಳಿಗೆ ಉತ್ತರವೆಂಬಂತೆ
ಊಹೆ ಕಲ್ಪನೆಯಲ್ಲೇ ನಿರ್ಮಿಸಿಕೊಂಡ
ಕನಿಸಿನ ಬದುಕೊಂದಿಗೆ
ದೂಕುವವು ಕಾಲ ಸದಾ..

ವಾಸ್ತವಕೆ ಕಡಿವಾಣವುಂಟೆ ಎಂಬಂತೆ
ಹೊಳೆದ ಆಕಾಂಕ್ಷೆಗಳಿಗೆ ಬೀಳುವುದು ಪೂರ್ಣವಿರಾಮ
ಬಂದಿರುವ ಗಿರಾಕಿಗಳ ಕೊಡಪಾನ
ತುಂಬಿದಂತ ಆಸೆಗಣ್ಣುಗಳಿಂದ
ಇಷ್ಟೇನಾ ನನ್ನ ಬದುಕು ಎನ್ನುವ
ನಿರ್ವಿಕಾರ ಒಂಟಿ ಪ್ರಶ್ನೆಯೊಂದಿಗೆ...

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Tuesday, January 29, 2013

ನಮ್ಮೂರು...



ಮದುವೆ ಲಗ್ನದಲ್ಲಿನ ಮೈಕ್ ಸೆಟ್ಟಿನ ಸೌಂಡು..
ಪ್ರತಿ ಸಂಜೆಯ ಊರ ಹೈಕಳ ಸದ್ದು..
ಕಾಣಿಯಾಗಿರೊ ಪಟ್ಟಿ ಸೇರಿವೆ...
ಮೈಕ್ ಸೆಟ್ ಪ್ರತಿ ಶುಭ ಕಾರ್ಯದಲ್ಲೂ ಪ್ರತೀಕದಂತಿತ್ತು...
ಪ್ರತಿ ಸಂಜೆಗಳು ಹೈಕಳ ಸದ್ದಿನಿಂದ ಆವೃತವಾಗುತ್ತಿದ್ದವು...
ಆ ಸದ್ದು ಮಾಯವಾಗಿ  ಸಂಜೆಗೂ ಕೂಡ ನಡು ರಾತ್ರಿಯ
ನೀರವ ಮೌನ ಆವರಿಸಿದೆ..
ಕಾರಣ ,
ಸರಕಾರ ಕೊಟ್ಟರೇನಂತೆ ಬಿಸಿ ಊಟ, ಸೈಕಲ್
ನಮ್ಮೂರ ಹೈಕಳು ಕಲಿಯಲು ಸಿಟಿ ಶಾಲೆಗೆ ಸೇರಿವೆ..
ಇನ್ನ ಅವು ಮನೆ ಸೇರುವುದು ರಾತ್ರಿ ಏಳರ ಊರ ಬಸ್ಸಿಗೆ..
ಅಪ್ಪ ಅಮ್ಮಂದಿರು ಇದನೆ ಬೀಗುತ್ತಿದ್ದಾರೆ ಅವರಿವರ ಮುಂದೆ
ತಮ್ಮ ಮಗು ಒಂದನೇ ತರಗತಿಗೆ ಇಂಗ್ಲೀಷ್ ಶಾಲೆಯಲಿ ಕಲಿಯುತಿರೊ ಕುರಿತು.

ಇನ್ನ ಊರ ಜಗುಲಿಗಳೆಂತು ಬಣಗುಡುತ್ತಿವೆ ಊರ ಯುವಕರಿಲ್ಲದೆ
ಕಾರಣ,
ನಮ್ಮೂರ ಯುವಕರು ಬೆಂಗಳೂರಂತ ನಗರಗಳ ಕ್ಲಬ್ಬು-ಬಾರುಗಳಲ್ಲಿ
ದುಡಿಯುತಿಹರು ಭೂಮಿಯಲಿ ಗೆಯ್ಯಲಾರದೆ...
ಒಟ್ಟಾರೆ ನಮ್ಮೂರಿನಲಿ ಈಗ ಈ ಗಾದೆ ಫೇಮಸ್ಸು
ಬೇಡವೆನಿಸಿದರೆ ಊರು ಸೇರಿ ಬೆಂಗಳೂರ ಬಾರು...

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್


Wednesday, January 16, 2013

ಮೊದಲ ರಾತ್ರಿ..


ಭಾರವೆನಿಸುತಿವೆ ಅವನ ಕೈಗಳು
ಅನುಮಾನ ಪಡುವಂತಾಗುತ್ತಿದೆ
ಅವನ ಸಂಭಾಷಣೆಗಳು..
ಇದು ಹೊಸತು ಅದು ಹಳತು
ಎಂದು ತಾಳೆ ಹಾಕುತಿರುವ
ಮನಸು  ತಿರುವಿ ಹಾಕುತಿದೆ
ಹಳೆಯ ಪುಟಗಳನು...

ಇವನ ಆಕ್ರಮಣ ಅತಿಕ್ರಮಣ
ಹೊಸತೆನಿಸಿದೆ ಮತ್ತು ಹೊಲಸೆನಿಸಿದೆ.
ಕೇವಲ ಮುತ್ತಿಗಾಗಿ
ಅವನು ಪಟ್ಟ ಪ್ರಯತ್ನವೆಷ್ಟು..? ಎಂದು
ತಾಳೆಹಾಕುತಿದೆ ಅವಳ ಮನಸು
ಹಳೆಯ ಹುಡುಗನೊಂದಿಗೆ..
ಕೋರಿಕೆ ಇರದ ಗೂಳಿಯಂತ ದಾಳಿ ಇವನದು
ಕಾಣಿಕೆಯಾಗಿ ಕೇಳಿಕೊಳ್ಳುತ್ತಿದ್ದ ಪಾಳಿ ಅವನದು..

ಗೆಳೆತನ, ಪ್ರೀತಿ ಮದುವೆ ಇವೆಲ್ಲವುಗಳ
ಮೂಲ ಉದ್ದೇಶ ಇದೊಂದೆ ಅಲ್ಲವೇ..?
ಎಂದು ಪ್ರಶ್ನಿಸುತಿರೋ ಇವಳು
ಎಂದೂ ಅವನಿಗೆ ಒಪ್ಪದೆ
ಇವನಿಗೆ ಚಾಚೂ ತಪ್ಪದೆ ಒಪ್ಪಿದೆ
ಮನ ನಿರಾಕರಿಸಲು ಸೋಲೊಪ್ಪಿದೆ
ನಿಜ ಜೀವನ ಇದೆ ಎಂದೆನಿಸಿದರೂ
ಇದು ಹೊಲಸು..

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್

Tuesday, December 11, 2012

ಅಮ್ಮ


ಇಂದು ಅಮ್ಮನ ಕುರಿತಾದ ನನ್ನ ಸಾಲುಗಳು..

ಅಮ್ಮ

ನಾ ಹುಟ್ಟಿದ ಮೇಲೆ ತಾನೆ
ನೀ ನಿನಗಾಗಿ ಬದುಕೋದ ಮರೆತದ್ದು..
ನನ್ನಲ್ಲೆ ನಿನ್ನ ಬದುಕ ಕಾಣತೊಡಗಿದ್ದು
ಎಂತಹ ಅನುಬಂದವಿದು
ಸೃಷ್ಟಿಕರ್ತನ ನಿಷ್ಕಲ್ಮಶ ಸಂಬಂದವಿದು..


ನಾ ಗರ್ಭದಲ್ಲಿರುವಾಗಲೇ
ನನ್ನ ಮೇಲೆ ಕಟ್ಟತೊಡಗಿದ
ಕನಸುಗಳನೆಲ್ಲ ಎಲ್ಲರೊಡನೆ ವಿವರಿಸುತ್ತಿದ್ದೆ..
ಅಂದೆ ನಿನ್ನೆಲ್ಲಾ ಕನಸು ನಾನಗತೊಡಗಿದೆ..

ಅತ್ತರೆ ಹಸಿವೆಂದು
ಮೊದಲು ಎದೆಹಾಲ ಉಣಿಸಿ..
ನನ್ನ ಖುಶಿಗೆಂದು ಅಪ್ಪನಿಂದ
ಏನೆಲ್ಲಾ ಆಟಾಸಾಮಾನ ತರಸಿ..
ನನ್ನ ನಗುವ ನೀ ನೋಡುತ್ತಿದ್ದೆ..

ತುತ್ತು ತಿನ್ನಲು ಹಟತೊಟ್ಟರೆ
ಮುತ್ತು ನೀಡುತ, ಅಪ್ಪನನ್ನೇ ಆನೆ ಮಾಡಿ
ನನ್ನ ಅಂಬಾರಿಯಂತೆ ಕೂರಿಸಿ
ಏನೆಲ್ಲಾ ಆಟ ಆಡಿಸಿ
ಚಂದಮಾಮನ ಕೊಡಿಸೋ ಆಸೆ ತೋರಿಸಿ
ನನ್ನ ಕಿಲ ಕಿಲ ನಗುವಲಿ
ಆ ನಗುವ ನಡುವಲಿ ತುತ್ತು ತಿನ್ನಿಸಿ
ಏನೆಲ್ಲಾ ಸಂತಸವ ಕಾಣುತ್ತಿದ್ದೆ..

ನೀನು ನಿನಗೋಸ್ಕರ
ಅಂದಿನಿಂದ ಖುಷಿಪಟ್ಟ ದಿನ
ನಾ ನೋಡಲೇ ಇಲ್ಲವಲ್ಲ
ಕಾರಣ ನಿನಗೆ ನಾನೇ ಎಲ್ಲ ಅಲ್ಲ..
ನನ್ನ ಕಣ್ಣಲೊಂದು ಹನಿ ಬಿದ್ದರೆ
ಅಂದು ಮರುಗಿದವಳು ನೀನೆ
ಇಂದಿಗೂ ಎಲ್ಲಿದ್ದರು ಕನಳುವಳು ನೀನೆ..
ನಿನ್ನ ಋಣ ಹೇಗೆ ತೀರಿಸಲಿ
ಮರು ಜನ್ಮದಲ್ಲಾದರೂ ನನಗೆ
ಕರುಣಿಸು ನಿನ್ನ ಸ್ಥಾನವ...

ಆತ್ಮೀಯವಾಗಿ..
ಜಗನ್ನಾಥ ಆರ್.ಏನ್

Wednesday, December 5, 2012

ಆಕೆ..?

ಆಕೆ..?

ಸಿಗುತಿಲ್ಲ ಎಷ್ಟು ಹುಡುಕಿದರು
ಕನಸಲಿ ಕಂಡ ಆಕೆಯ ವಿಳಾಸ..
ಇಂದಿಗೂ ಕನಸಲಿ ಕಂಡ
ಆಕೆಯ ನಗು ದನಿಗುಡುತ್ತಲೆ ಇದೆ.
ಸದಾ ಕಾಡುತ್ತಲೆ ಇದೆ.

ಕನಸ ವಿವರಣೆ ನೀಡುವೆ ಹುಡುಕಿಕೊಡುವಿರಾ..?
ಸಿಕ್ಕರೆ ನಿಮಗ್ಯಾರಿಗಾದರೂ
ನನ್ನ ತಳಮಳ ತಿಳಿಸಿ
ಕಳಿಸಿಕೊಡುವಿರಾ ನನ್ಮ ಬಳಿ..

ಎಷ್ಟು ದಿನವಾದರೂ ಸಿಗಲೇ ಇಲ್ಲ
ಕೇಳಿಕೊಂಡವರ್ಯಾರೂ ಕಳುಹಿಸಲೇ ಇಲ್ಲ...
ಎಷ್ಟಾದರೂ ಇದು ಹೇಳಿ-ಕೇಳಿ
ವಯಕ್ತಿಕ ಪ್ರಪಂಚ..
ಕೇಳಿಸಿಕೊಳ್ಳುವ ಕಿವಿಗಳೇ ಇಲ್ಲದಿರುವಾಗ
ಹೇಳಿಯಾದರೂ ಏನು ಪ್ರಯೋಜನ..?

ಆಗೊಮ್ಮೆ -ಇಗೊಮ್ಮೆ
ಕಾಡುತ್ತಲೇ ಉಳಿದಿದ್ದ ಆಕೆ ಯಾರೆಂದು
ಈ ಬಾರಿ ಊರಿಗೆ ಹೋದಾಗ
ಗೋಡೆ ಮೇಲಿನ ಫೋಟೊದ ಚಿತ್ರವ
ತದೇಕಚಿತ್ತದಿ ನೋಡುತ್ತಿದ್ದಾಗಲೇ ತಿಳಿದದ್ದು
ಆ ನಗು ನನ್ನಮ್ಮನದು ಎಂದು..

ಇದ್ದಾಗ ಒಂದಿಷ್ಟು ಸಣ್ಣ ನಗುವ
ಅವಳ ಮೊಗದಲ್ಲಿ ನೋಡಲೇ ಇಲ್ಲ..
ನಗುವ ತರಿಸೋ ಪ್ರಯತ್ನವ ಮಾಡಲೇ ಇಲ್ಲ ನಾನು...
ಬರಿ ದುಡಿದೆ ದುಡಿದೆ ದೂರವಾಗಿ ಹೋದಳು...


ಆತ್ಮೀಯವಾಗಿ..
ಜಗನ್ನಾಥ ಆರ್.ಎನ್