Monday, March 4, 2013

ಗುಳಿಗೆನ್ನೆ ಹುಡುಗಿಗೊಂದು ಪತ್ರ...

ಪ್ರಿಯ ಸಖಿ,
ಸೌಖ್ಯವೇ...?
ಇಲ್ಲಿ ಮಳೆಗಾಲ ತರುತಿದೆ
ಮತ್ತೆ-ಮತ್ತೆ ಹೊತ್ತು ನಿನ್ನ ನೆನಪ..
ಮುಂಜಾನೆಯ ರವಿ ಕೂಡ ಕದ ತಟ್ಟಿಹ
ಬಲು ತಡವಾಗಿ..
ಇನ್ನ ಬೀಳೋ ಕನಸುಗಳು ಬರಿ
ನಿನ್ನ ನೆನಪಿನ ಮೂಟೆ ಹೊತ್ತು ತಂದಿವೆ..
ಕನಸೆಂದರೇ ಏನು, ಬರಿ ಭವಿಷ್ಯವಾ..?

ಯಾವುದರ ಹಂಗಿಲ್ಲ
ನಿನ್ನ ನೆನಪಿನ ಗುಂಗಲ್ಲಿ..
ನೀ ನನಗಿಟ್ಟ ಆ ಮೊದಲ
ಪತ್ರ ಹೊಮ್ಮಿಸಿದೆ
ನೆನಪಿನ ನಾದವ ತನ್ನ ನಾಭಿಯಿಂದ...

ಗುಳಿಗೆನ್ನೆ ಹುಡುಗಿ ನೀನು,
ನಿನ್ನ ಆ ನಗು ಕಾಡುತ್ತಿದೆ ಸದಾ..
ವಾಸ್ತವ ಏನ ಬೇಡುತ್ತಿದೆಯೋ
ತಿಳಿಯದು...
ಮತ್ತೆ-ಮತ್ತೆ ಒಲವಾಗುತ
ಪದೇ-ಪದೆ ಮನಸೇಕೋ
ನೆನಪಿಗೆ ಜಾರಿಹಿದು..

ಕಡಲ ದಡದಲ್ಲೂ
ಮುಗಿಲ ಮೊರೆಯಲ್ಲೂ
ಏಕಾಂತದ ಸುಳಿ
ಒಳ ಹೊಕ್ಕಿರುವ ಆ ಗುಳಿ
ಸುಡುತಿಹುದು
ಈ ಚಳಿಗಾಲದಲ್ಲೂ...

ಒಡಲ ಒಳದನಿ
ಸುರಿಸೋ ಕಂಬನಿ
ಒರೆಸಲು ಯಾರಿಲ್ಲದ
ಈ ಅಲೆಮಾರಿ ದನಿ
ಎಂದೂ ಅನಾಥ
ಎಂದಿನಂತೆ...

ಇಂತಿ..
ನಿನ್ನ ಸಖ..


ಆತ್ಮೀಯವಾಗಿ,
ಜಗನ್ನಾಥ ಆರ್.ಎನ್

Thursday, February 21, 2013

ಮುಂಗುರುಳು...

ಬೀಸುತಿರೋ ಜೋರು ಗಾಳಿ
ಗೆಳತಿ ಗಲ್ಲದ ಮೇಲೆ
ಮಾಡುತಿರೋ ತೊಂದರೆ ನೋಡಿ..
ಅದರ ಮೇಲೆ ನಡೆಸುವ
ಮುಷ್ಠಿ ಪ್ರಹರವ
ಏನೋ ಗುನುಗುತ
ದಾರಿಯಲಿ ಹಾಗೆ ಸಾಗುವ
ಬಾನಿನೆಡೆಗೆ ನೋಡುತ
ಸೃಷ್ಟಿ ಅನುಭವ
ಸೊಗಸು ಎನ್ನುತ...

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್


Tuesday, February 19, 2013

ಸಾಕ್ಷಿ..




ಅರಿವಿಲ್ಲದೇ ಬಿದ್ದ ಈ ಕಣ್ಣ ಹನಿಗಳೇ
ನನ್ನ ನೈಜ ಪ್ರೇಮಕ್ಕೆ ಸಾಕ್ಷಿ ಕಣೆ
ಏನೂ ಬದಲೆನಿಸದೇ
ನನ್ನ ಮತ್ತು ಆತನ ದನಿಯ ನಡುವಲಿ..

ನೈಜ ಪ್ರೀತಿಯೇ ಅರ್ಥವಾಗುವುದಿಲ್ಲವಲ್ಲ
ನಿಮ್ಮಂತ ಮರುಳು ಹುಡುಗಿಯರಿಗೆ
ಪ್ರೇಮವೆಂದರೇ ಹಿಡಿ-ಹಿಡಿ ಬೂಟಾಟಿಕೆಯ
ಮಾತುಗಳ ಆಶ್ವಾಸನೆ ಅಲ್ಲ..

ಹಿಡಿದಿಟ್ಟ ಎದೆಯ ಭಾವಗಳ
ಪ್ರತಿಬಿಂಬ  ಬದಲಿಸಿದಾಗ
ಪ್ರೇಮಿಯ ಹಾವ-ಭಾವ
ಅರ್ಥವಾಗದೇನು..?
ಯಾವುದು ಸತ್ಯಕ್ಕೆ ಸನಿಹ ಎಂದು...

ಏನು ಮಾಡುತ್ತೀರಿ ಹೇಳು
ನೀವು ಹುಡುಗಿಯರೇ ಹೀಗೆ
ಬೇಕಿರುವುದು ಬರಿ ಮಾತು,
ಜೊತೆಗಾಗಿ ಸುತ್ತಾಟ..
ಇವಿಷ್ಟೇ ಪ್ರೇಮ ಎಂದುಕೊಂಡಿರುವಿರಿ..

ನಿಜವಾದ ಪ್ರೇಮ ಎಂದೂ ಮೂಕವೇ
ಹಸಿರಸಿರ ಎಲೆಗಳ ನಡುವಿನ ಮೊಗ್ಗಂತೆ
ಹಾಗೂ ಈ ಉಸಿರ ಏರಿಳಿತಗಳ ನಡುವೆ
ಜಪಿಸುವ ನಿಮ್ಮ ಹೆಸರಂತೆ..

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್

ಸಮರ್ಥನೆ...



ವ್ಯಕ್ತಿಗಳು ನೀಡುವುದು
ಸರಿಯಾಗಿ ಒಂದೇ,
ತಮ್ಮೆಲ್ಲಾ ತಪ್ಪುಗಳಿಗು
ಸಮರ್ಥನೆ...

ಆತ್ಮೀಯವಾಗಿ,
ಜಗನ್ನಾಥ. ಆರ್.ಎನ್

Friday, February 8, 2013

ಹನಿಗಳು-5

   

1.     ಅಮಲು..

          ನಿನ್ನ ಕಲ್ಪನೆಯ
          ಖುಷಿಯೊಂದು ಅಮಲು
          ಎಂದು ತಿಳಿಸಿದ್ದು
          ನಿನ್ನ ವಿದಾಯ..

2.     ಹಗರಣ

          ಹಳೆ ಗೆಳತಿ
          ಕೈ ಕೊಟ್ಟಳು ವಿನಾಕಾರಣ
          ಹೊಸ ಗೆಳತಿ
          ಕೇಳುವಳು ಎಲ್ಲವಕೂ ಕಾರಣ
          ಒಟ್ಟಾರೆ ಪ್ರೀತಿಯಲಿ
          ಈ ಕಾರಣಗಳದ್ದೆ
          ಬಹು ದೊಡ್ಡ ಹಗರಣ..

        ಆತ್ಮೀಯವಾಗಿ,
        ಜಗನ್ನಾಥ.ಆರ್.ಎನ್
 

Monday, February 4, 2013

ಆಸೆಯೇ ದುಃಖಕೆ ಮೂಲ...




ದಾರಿಯ ಮಧ್ಯೆ
ಕವಲಾದವಳು ನೀನು
ಬದುಕಿನ ಮಧ್ಯೆ
ಒಲವ ಹೆಸರಲ್ಲಿ
ಬಂಧಿ ಆದವನು ನಾನು
ಉಳಿಸಿಕೊಳ್ಳಲಾರದೇ
ಹೊದೆಯಲ್ಲ ನಮ್ಮಿಬ್ಬರ ನಡುವಿನ ಮಾತನು..

ಸಮಯಕ್ಕೆ ಅರ್ಥ
ವ್ಯಯಿಸಿದ್ದಕ್ಕೆ ಸಿಕ್ಕರೆ ಉತ್ತರ
ಇಲ್ಲವಾದರೇ ಅದೂ ಕೇಳದೇ
ಇರುವುದೇ ವ್ಯಯಿಸಿದ್ದಕ್ಕೆ ಪ್ರಶ್ನೆ.(.?.)

ಸುಮ್ಮನೇಕೋ ಮೂಕ ಸಾಕ್ಷಿಗಳಾದವು
ನಮ್ಮ ಪ್ರೇಮದ ನಡುವಲಿ
ಬಲಿಪಶುವಾದ ವಸ್ತುಗಳು
ನಮ್ಮ ಪ್ರೇಮವೇ ಮೂಕರಾಗವಾಗಿರುವಾಗ
ಸಾಕ್ಷಿಗಳು ಮೂಕವಾಗಿರುವುದರಲ್ಲೇನು
ಬಂತು ಹೇಳು..

ಆಸೆಗಳ ಕಣಜ ತಾನೆ.!
ನನ್ನಂತೆ ಈ ಮನುಜ
ನಿನ್ನ ಪಡೆದೇ ಪಡೆಯುವನೆಂದು
ಇದ್ದ ಆಸೆಯೋ ದುರಾಸೆಯೋ
ಆಯಿತಲ್ಲ ಕೊನೆಗೂ ನಿರಾಸೆ

ಮನ ಸುಮ್ಮನಾಯಿತು
ಯಾಕೆ ಗೊತ್ತೇ..?
ಆಸೆಯೇ ದುಃಖಕೆ ಮೂಲ
ಎಂಬ ಬುದ್ಧನ ಮಾತು ನೆನೆದು..

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Sunday, February 3, 2013

ಹನಿ-4


ಅಂಕಣ

ಕಾರಣವಿಲ್ಲದೇ
ಕನಸಲಿ ಬಂದೆ ನೀನು..
ಉತ್ತರ ನೀಡದೇ
ತಡವರಿಸಿ ಹೋದೆ ನಾನು..
ಆ ಒಂದು ಪ್ರಶ್ನೆಗೆ
ಏನ ಹೇಳಲಿ ನಾನು ತಕ್ಷಣ
ಮನವಿನ್ನು ಖಾಲಿ ಅಂಕಣ..

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Friday, February 1, 2013

ಹನಿಗಳು-3




7-8 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಇಂಜಿನೀಯರಿಂಗ್ ಓದುವಾಗ ಬರೆದ ಕೆಲವು ಹನಿಗಳು..
1. ಹುಡುಗಾಟಿಕೆ

  ವಯಸ್ಸಿನಲ್ಲಿ
  ಹುಡುಗ-ಹುಡುಗಿಯರಲ್ಲಿರಬೇಕಂತೆ
  ಸ್ವಲ್ಪವಾದರೂ ‘ಹುಡುಗಾಟಿಕೆ’
  ಆದರೆ ಇತ್ತೀಚೆಗೆ
  ಹುಡುಗಿಯರಿಗೆ
  ಹುಡುಗ ‘ಆಟಿಕೆ’

--------------------------------
2.ದುಬಾರಿ

  ಅಂದು ಗರ್ಲ್ ಫ್ರೆಂಡುಗಳು
  ಆಗುತ್ತಿದ್ದರು
  ಎಲ್ಲಕೂ “ಆಭಾರಿ”
  ಆದರೆ ಇಂದು ಗರ್ಲ್ ಫ್ರೆಂಡುಗಳು
  ಬಲು “ದುಭಾರಿ”

--------------------------------
3. ಪ್ರಶ್ನೆ..?
  ಅವನಂದನು ನಲ್ಲೆ
  ನೀ ಹುಣ್ಣಿಮೆ ದಿನದ
  ಚಂದಿರನಂತೆ ಎಂದು
  ಅವಳಂದಳು ಬೇರೆ ದಿನಗಳು
  ಇನ್ಯಾರಂತೆ ಎಂದು..?!

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Thursday, January 31, 2013

ಪ್ರೇಮ...



ಮರೆಮಾಚಿ ನೋಡುವುದರಿಂದ
ಆರಂಭಗೊಂಡ ಪ್ರೇಮ
ಭಾವ ಬಂಧನದಿಂದ
ಸಿಗುವುದೇ ಈ ಪ್ರೇಮ..
ಬರೆಯೋ ಪ್ರೇಮ ಪತ್ರಗಳ
ಕೊಡಲಾಗದೇ ಹರಿಯುವುದರಿಂದ
ತಿಳಿಯುವುದೇ ಈ ಪ್ರೇಮ..
ಕಣ್ಣ ಹನಿಗಳಿಂದ
ಫಲಿಸುವುದೇ ಈ ಪ್ರೇಮ..
ಮೂಕರಾಗವಾಗಿ ಉಳಿದುಹೋದ
ಎದೆಯ ಹಾವ-ಭಾವ
ತಿಳಿಯೋಲ್ಲ ತಿಳಿದುಕೊಳ್ಳೋಲ್ಲ
ಯಾವುದೇ ಹೆಣ್ಣು ಜೀವ...

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Wednesday, January 30, 2013

ಕೆಂಪು ದೀಪದಲ್ಲೊಂದು ಅಳಲು



ಇಲ್ಲಿ ಎಲ್ಲವೂ
ಕಳೆದು ಹೋದ ಮುಖಗಳೇ
ಎನೋ ನೆನೆಯುವವು.
ಯಾಕೋ ನಲಿಯುವವು
ಸುಮ್ಮನೆ ಕುಳಿತು ಕಳೆಯುತ್ತಿದ್ದರೆ ಕಾಲ
ಮಾಲೀಕಳ ಗದರಿಕೆಗೆ ಎಚ್ಚರವಾಗಿ
ಬೀರುವವು ವ್ಯವಹಾರಿಕ
ನಸು-ನಗೆ
ವಿವಿಧ ಬಗೆ
ಬರುವ ಗಿರಾಕಿಗಳಿಗೆ...

ಬಯಲಾಗಿ ಇಟ್ಟಿರುವ ದೇಹಕ್ಕೆ ಸಿಕ್ಕಾಗ ವಿರಾಮ
ಮುಂದುವರೆಯುವುದು ಮಂಥನ
ಮತ್ತದೆ ಪ್ರಶ್ನೆಗಳಿಗೆ
ಇಟ್ಟಿದ್ದ ಕಾಮಾ,

ಗಂಡ, ಮಕ್ಕಳು, ಸಂಸಾರ, ಸಿನಿಮಾ, ಸುತ್ತಾಟ
ಎಲ್ಲವೂ ತನ್ನ ವಾರಿಗೆ ಗೆಳತಿಯರ
ಬದುಕು ನೆನೆದಾಗ
ಲಗ್ಗೆಯಿಡುವ ಪ್ರಶ್ನೆಗಳಿಗೆ ಉತ್ತರವೆಂಬಂತೆ
ಊಹೆ ಕಲ್ಪನೆಯಲ್ಲೇ ನಿರ್ಮಿಸಿಕೊಂಡ
ಕನಿಸಿನ ಬದುಕೊಂದಿಗೆ
ದೂಕುವವು ಕಾಲ ಸದಾ..

ವಾಸ್ತವಕೆ ಕಡಿವಾಣವುಂಟೆ ಎಂಬಂತೆ
ಹೊಳೆದ ಆಕಾಂಕ್ಷೆಗಳಿಗೆ ಬೀಳುವುದು ಪೂರ್ಣವಿರಾಮ
ಬಂದಿರುವ ಗಿರಾಕಿಗಳ ಕೊಡಪಾನ
ತುಂಬಿದಂತ ಆಸೆಗಣ್ಣುಗಳಿಂದ
ಇಷ್ಟೇನಾ ನನ್ನ ಬದುಕು ಎನ್ನುವ
ನಿರ್ವಿಕಾರ ಒಂಟಿ ಪ್ರಶ್ನೆಯೊಂದಿಗೆ...

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Tuesday, January 29, 2013

ಹನಿ-2




ಮನದಾಳದ ತುಮುಲ
ಒಡಲಾಳದ ಒಲವು
ಕಣ್ಣಂಚಿನ ಕನಸು
ಸೋಲುತ್ತಲೇ ಇರೊಮನಸು
ಗುನುಗೋದು ಕಡೆವರೆಗು
ನಿನದೊಂದೆ ಹೆಸರು...

  ಆತ್ಮೀಯವಾಗಿ,
  ಜಗನ್ನಾಥ. ಆರ್.ಎನ್