Wednesday, February 26, 2014

ಗೆಳತಿ,
ಏನಿದೆ ಈ ಮುಗಿಲಲಿ..
ಏನಿದೆ ಈ ಕಡಲಲಿ..
ಎಲ್ಲಕೂ ಮಿಗಿಲಿದೆ
ನಿನ್ನಾ ಮಡಿಲಲಿ..

..ರಾಮೇನಹಳ್ಳಿ ಜಗನ್ನಾಥ

Tuesday, February 25, 2014

ತೇರು..

ಬುಡ ಸಹಿತ ಕೀಳಲಾಗದ
ನಿನ್ನ ಭಾವಗಳ ಬೇರು..
ನೆನಪ ರಹಿತ ಇರಲಾರದ
ನನ್ನ ರಾತ್ರಿಗಳ
ಹೊತ್ತೊಯ್ಯೋ ತೇರು...

----ರಾಮೇನಹಳ್ಳಿ ಜಗನ್ನಾಥ

ಮಿನುಗು..

ಗೆಳತಿ,
ನಡುರಾತ್ರಿಯಲಿ
ಆಕಾಶ
ಮಿನುಗುತಿರುವಾಗ...
ನನ್ನ ಕಂಗಳು ಮಾತ್ರ
ಜಿನುಗುತಿದ್ದೊ
ನಿನ್ನ ನೆನೆದು..

Wednesday, February 19, 2014

ಅಲೆ..



ಗೆಳೆಯ,
ನಿನ್ನ ಒಲವಿಗೆ ಕೊಚ್ಚಿಹೋದ
ಹಾಳು ಹುಡುಗಿಗೆ
ದಡದ ಮಡಿಲು ಸಿಗದೆ
ಅಲೆಯಾಗಿ ಉಕ್ಕುತಿಹಳು
ನೆನೆ-ನೆನೆದು ಬಿಕ್ಕುತಿಹಳು
ಯಾಕೋ ಇಂದು
ಹೆಚ್ಚು-ಹೆಚ್ಚು ಕೊರಗುತಿಹಳು
ಮತ್ತೆ-ಮತ್ತೆ ಕರಗುತಿಹಳು
ನಿನ್ನ ಒಲವಿಗೆ ಅದರ ಚಲುವಿಗೆ…

ಪಲ್ಲವಿಯಲು ಹಾಡಿದ
ಚರಣದಲು ಬೇಡಿದ
ಈ ಹಾಳು ಹುಡುಗಿಯ ಹಾಡು ಕೇಳದೆ..?
ಖುಷಿಯ ಮಡಿಲಲಿ
ಉರುಳಬೇಕಿದೆ ನಾಲ್ಕು ಹನಿಗಳು
ನಿನ್ನ ಭುಜದಲಿ..
ಸೇರು ಗೆಳೆಯನೆ..ನನ್ನ ಒಡೆಯನೆ..

---ರಾಮೇನಹಳ್ಳಿ ಜಗನ್ನಾಥ


Wednesday, February 12, 2014

ತಬ್ಬಲಿ..



ಗೆಳತಿ,
ಹಾಳು ಹೃದಯದ
ಭಾವಗಳ ಮಾಡುತ
ತಬ್ಬಲಿ..
ಉಳಿದು ಹೋಗಬೇಡ ಹಾಗೆ
ಕಣ್ಣಂಚಿನ ಹನಿಯಾಗಿ..
       …..ರಾಮೇನಹಳ್ಳಿ ಜಗನ್ನಾಥ

ಹಲ್ಲೆ..


Tuesday, February 11, 2014

ಖಾಲಿ..

ಗೆಳತಿ,
ಖಾಲಿ ಕಾಗದಕ್ಕೂ ತಿಳಿದಿದೆ
ಖಾಲಿಯಾದ ಬಾಟಲಿಯಂತೆ
ಮತ್ತೆ,
ನಿನ್ನ ಆಲೋಚನೆ
ನನ್ನ ಕುರಿತೆ ಎಂದು..

----ರಾಮೇನಹಳ್ಳಿ ಜಗನ್ನಾಥ

ಒಂದಿಷ್ಟು ಗೊಂದಲದ ಪ್ರಶ್ನೆಗಳು



ಬದುಕಬೇಕಿದೆ ಕೇವಲ
ಈ ಭೂಮಿಯ ಮೇಲೆ  ಹುಟ್ಟಿದ್ದಕ್ಕಾಗಿ
ಕಾರಣ,
ಈ ಬದುಕಿನಲ್ಲಿನ ಶ್ರೇಷ್ಠತೆಗಳು, ನಂಬಿಕೆಗಳು ಇತ್ಯಾದಿ..ಇತ್ಯಾದಿ..
ಯಾವುದನೂ ಸರಿಯಾಗಿ ಗುರುತಿಸಲಾರದ
ವಾತಾವರಣವೇ ಇಲ್ಲದಿರುವಾಗ
ಬದುಕಿನ ಸಾರ್ಥಕತೆಯ ಬಗ್ಗೆ
ಗೊಂದಲಗಳು ತಳವೂರಿವೆ...

ಸರಿ-ತಪ್ಪುಗಳ್ಯಾವುದೆಂದು
ಸರಿಯಾಗಿ ಅರ್ಥವೇ ಆಗದೆ,
ಅವರವರ ದೃಷ್ಠಿಕೋನಗಳಿಗಿಲ್ಲಿ
ತಪ್ಪುಗಳು ಸರಿಯಾಗಿ ಬದಲಾಗಿವೆ
ತಪ್ಪು ಈಗ ತಪ್ಪಾಗೆ ಉಳಿದಿಲ್ಲ
ಒಟ್ಟಾರೆ ಸಾಗುತಿದೆ ಗೊಂದಲದಲೇ ಬದುಕು..

ಸತ್ಯವೆಂತು ಹಾಸ್ಯಾಸ್ಫದವಾಗಿ
ಹರಿಶ್ಚಂದ್ರನ ಉದಾಹರಣೆ
ಹೊಗಳಿಕೆಗೋ-ತೆಗಳಿಕೆಗೋ
ತಿಳಿಯದಾಗಿದೆ...
ವಿಜ್ಞಾನಿಗಳ ಶ್ರಮ ಫಲಪ್ರದವಾದರೆ
ಸ್ವಚ್ಚಂದ ಬದುಕ ಕಟ್ಟಿಕೊಳ್ಳಬಹದಾ..?
ಮಂಗಳ ಗ್ರಹದಲ್ಲಿ..?

            

--ರಾಮೇನಹಳ್ಳಿ ಜಗನ್ನಾಥ

Friday, September 6, 2013

ಮಳೆಹನಿ..

 
ಇನಿಯನ ನೆನಪಲ್ಲಿ
ಮೋಡ ಸುರಿಸುತ್ತಿದ್ದ
ನಾಲ್ಕು ಹನಿಯ ಕಂಡು
ಮರುಗಿದ ರವಿ ಬಂದು
ಬದಲಿಸಿದ ಮೋಡದ ಛಾಯೆಯ
ಮಳೆಬಿಲ್ಲಾಗಿ.....

-----ರಾಮೇನಹಳ್ಳಿ ಜಗನ್ನಾಥ

Thursday, August 8, 2013

ಬರಬಾರದ ಮತ್ತೆ..

ಕೊರಗುತ್ತಲೇ ಇದ್ದಾಳೆ
ಕನಲುತ್ತಲೇ ಇದ್ದಾಳೆ
ಅವಳು ಅಂದಿನಿಂದಲೂ
ಅವ ಯಾರೋ ಏನೋ ಒಮ್ಮೆಯೂ
ಎಲ್ಲಿಯೂ ಕಂಡವನಲ್ಲ ಎಂದೂ
ಮೊದ-ಮೊದಲು ಮಾಮೂಲಿಯಂತೆ
ಇದ್ದವಳು..

ಕ್ಷಣದಲ್ಲೇ..!
ತನು-ಮನವ ಮನಃಪೂರ್ತಿ
ಒಪ್ಪಿಸಿಕೊಂಡಳು
ಅವನು ಬಂದಾಗ ಅಂದು.
ವಿಧುರನೋ ವಿಲಾಸಿಯೋ ಕಾಣೆ
ಒಟ್ಟಾರೆ ಬಂದವ ಅಂದು
ಇಂದಿಗೂ ಈ ಬೀದಿಗೆ ನಾಪತ್ತೆ
ಅಂದಿನಿಂದಲೂ ಬಂದವರೆಷ್ಟೋ
ಹೋದವರೆಷ್ಟೋ ಇವನಂತಹ
ಗಿರಾಕಿಗಳು ಮತ್ತೆ-ಮತ್ತೆ

ಆದರೆ,
ಅವನೇಕೆ ಹಾಗೆ.?
ಮನದಲ್ಲಿ ಉಳಿದುಕೊಂಡಿಹನು
ಎಂದುಕೊಡಿರುವಿರಾ ನೀವು

ಈ ಪ್ರೀತಿ ಹೆಸರಲ್ಲಿ ಉಳಿಸಿಹನಲ್ಲ
ನನ್ನವನೊಬ್ಬ ಇಂದಿಗೂ ನೋವು
ಅವನಂತಯೇ ಕಂಡಿದ್ದ ಆತ
ಕ್ಷಣಿಕದಲ್ಲೇ ಹಳೆತಲ್ಲ ಮರತೆ
ಅವನಲ್ಲಿ ಬೆರೆತೆ..

ನಂತರದಿ ನೆನಪಾದಾಗ ವಾಸ್ತವ
ನಿದ್ದೆ ಮಂಪರಿನಲ್ಲಿ
ನಾ ಎದ್ದು ನೋಡುವಷ್ಟರಲ್ಲಿ
ಅವನಾಗಿದ್ದ ಮರೆ ಮತ್ತೆ ಹೆಚ್ಚಿಸಿ
ನನ್ನ ನೋವಿನ ಹೊರೆ..

ಅದೇಕೋ,
ಎಂದೂ ಯಾರೂ ನೀಡದಷ್ಟು ಗರಿ-ಗರಿ ನೋಟುಗಳು
ತಲೆದಿಂಬಿನಡಿಯಲ್ಲಿ ಇಣಕಿ ನೋಡುತ್ತಿದ್ದವು
ಇಷ್ಟೇ-ಇಷ್ಟೇ ನಿನ್ನ ಬೆಲೆಯೆಂದು..!

ಅವನಾಗಿದ್ದರೆ ನನ್ನ ಕಂಡಾಗ
ಗುರುತು ಸಿಕ್ಕಿತೋ ಇಲ್ಲ
ಗುರುತು ಸಿಕ್ಕಿಯೂ ಸಿಕ್ಕದವನಂತೆ
ನಟಿಸಿದನೋ..

ಅದೆಲ್ಲಿ ಅರ್ಥವಾಗಬೇಕು ಹೇಳಿ
ಬಂದವರೆಲ್ಲಾ ನನ್ನ ಬಗ್ಗೆ ವಿಚಾರಿಸುತ್ತಾರೆಯೇ..?
ನಾ ಅವರನ್ನು ಅರಿಯಲು.
ಬಂದವರು ತಮ್ಮ-ತಮ್ಮ ಇಷ್ಟಾರ್ಥಗಳ
ಹೊಂದುವ ಬಯಕೆಯಲಿ
ತೋರುವರು ಆತುರ ಅಲ್ಲವೇ..?

ಇರಲಿರಲಿ ಬಿಡಿ
ಬರುವ ಗಿರಾಕಿಗಳ ಬಗ್ಗೆಯೇಕೆ ಕೊಂಕುಮಾತು
ಆದರೂ ಅವನ್ಯಾರು
ಒಮ್ಮೆಯಾದರೂ ಹಿಂದುರಿಗಿ ಬರಬಾರದೇ
ಈ ಬೀದಿಗೆ ಮತ್ತೆ..

--------ರಾಮೇನಹಳ್ಲಿ ಜಗನ್ನಾಥ
ಕಲೆ--ಲಕ್ಷ್ಮಣ ಕಲ್ಯಾಣಿ
(ಈ ಕವನ ಸುಮಾರು 8 ವರ್ಷಗಳ ಹಿಂದೆ ಬರೆದದ್ದು..)



Saturday, August 3, 2013

ಎರಡು ಪ್ರಾಣಿಗಳು..

ಇಲ್ಲೊಂದು  ಪ್ರಾಣಿಯ
 ತುಂಬ
ಕಿಚ್ಚು ತುಂಬಿದೆ..
ಇನ್ನೊಂದು ಪ್ರಾಣಿಯ
ತುಂಬಾ ಹೊಟ್ಟೆಕಿಚ್ಚಿದೆ..

-----ರಾಮೇನಹಳ್ಳಿ ಜಗನ್ನಾಥ

Friday, August 2, 2013

ಮೂಕರಾಗವಾಗಿ ಉಳಿದು ಹೋದ
ಎದೆಯ ಹಾವ-ಭಾವ
ತಿಳಿಯೋಲ್ಲ ತಿಳಿದುಕೊಳ್ಳೋಲ್ಲ
ಯಾವುದೇ ಹೆಣ್ಣು ಜೀವ...
-----------
ರಾಮೇನಹಳ್ಳಿ ಜಗನ್ನಾಥ

Wednesday, July 31, 2013

ರೆಪ್ಪೆ ಅಂಚಿನ ಸಂಚು...

ನಿನ್ನ ಕಣ್ಣ ರೆಪ್ಪೆ ಅಂಚು
ಹೊಂಚುಹಾಕಿ
ಮಾಡುತಿಹ ಸಂಚನು
ಕಂಡ ಈ ಅಲೆಮಾರಿ ಮನಸು
ಸುರಿಸುತಿಹುದು ನವಿರಾದ
ಆಸೆಕಿಡಿಯ ಜಡಿಮಳೆಯನು...

ತುಟಿ ಅಂಚಿನ ಸಣ್ಣದೊಂದು
ಕಿರುನಗೆಗೆ ಮೂಡಿದ
ಗುಳಿಗೆನ್ನೆ ಕಂಡ
ಈ ಅಲೆಮಾರಿ,
ಹೂಮನಸ ತುಂಬ
ನಿನ್ನ ಸೂರ ಕಟ್ಟಿ 
ನಿನಗಾಗೆ ಕಾದಿಹನು...

ನನ್ನ ದೇವಿ ನೀನು,
ಹೊಂಗನಸ ತೇರ ಕಟ್ಟಿ
ಕಾದಿಹ ಹುಡುಗನ
ಹೂಮನಸಲೀಗ ಶುರುವಾಗಿದೆ
ಅರಿವಿಲ್ಲದೇ ಮೆರವಣಿಗೆಯು...
ನಿನ್ನ ಕುರಿತೆ ಸಾಲು-ಸಾಲು
ಬರವಣಿಗೆಯು....

-------ರಾಮೇನಹಳ್ಳಿ ಜಗನ್ನಾಥ

Tuesday, July 16, 2013

ಹನಿಗಳು-

ಗೆಳತಿ,
ನೋಡೋ ಕಂಗಳಿಗೆ
ಕಾಣಬಹುದು ನೂರಾರು ಹುಡುಗಿಯರು..
ನಿನ್ನ ಕಾಣದ ನನ್ನ ಕಂಗಳಿಗೆ
ಕಾಣುವವರೆಲ್ಲಾ ನೀನೇ ಅನಿಸುವರು...
----------------------------------------
ಗೆಳತಿ,
ಖಾಲಿ ಹೃದಯದಿ
ರೇಖೆ ಬಿಡಿಸಿದೆ...
ಕ್ಯಾಮೆ ಇಲ್ಲದ
ಖಾಲಿ ಮನಸಿಗೆ
ಕೆಲಸ ನೀಡಿದೆ
ಅದಕೀಗ,
ಹೃದಯ ಮನಸುಗಳೆರಡು
ನಿನ್ನೆ ಬೇಡಿವೆ...
-------------------------------------
ಗೆಳತಿ
ನಿನ್ನ ನೆನಪುಗಳ ನಭದಲ್ಲೀಗ
ಮೋಡ ಕವಿದ ವಾತಾವರಣವಿದೆ..
ಅರಿಯದೇ ಸುರಿಯಬಹುದೇನೋ
ಈಗ ಮಳೆಹನಿ....
-----------------------------------------
ನನ್ನ ಮೌನದೊಳಗಿನ
ಸದ್ದು...
ನೀನೇ ಕಣೆ
ಓ ನನ್ನ ಮುದ್ದು....
------------------------------------
ರಾಮೇನಹಳ್ಳಿ ಜಗನ್ನಾಥ
ಗಳತಿ,
ಕೋಪದಲಿ ನೀನಾಡಿದ
ಮಾತುಗಳಿಗೆ ನಾ ಮೌನಿ..
ಏಕಾಂತದಲಿ ಆಲೋಚಿಸುವ
ವೇಳೆಯಲು ನಾ ನಿನ್ನ ಧ್ಯಾನಿ...

----ರಾಮೇನಹಳ್ಳಿ ಜಗನ್ನಾಥ

Monday, July 15, 2013

ಕದ್ದು-ಕದ್ದು..

ಗೆಳೆಯ,
ಪ್ರತಿದಿನವು ದಾರಿಯಲಿ
ನೀ ಎದುರಾದಾಗ
ಮನಸಿನ ಮಾತನು
ಕೇಳದ ಕಂಗಳು
ನೋಡುವವು ಕದ್ದು-ಕದ್ದು
ಓರೆಗಣ್ಣಲಿ ನಿನ್ನನ್ನೆ..

ಕಣ್ತುಂಬ ನೀನೆ ತುಂಬಿಕೊಂಡಿರೋ
ನನಗೀಗ ದೃಷ್ಠಿದೋಷ ಬಂದಿಹುದು
ಅರಿಯದೇ ಈ ಹೃದಯ
ನಿನ್ನ ಒಲವಲಿ ಜಾರಿಹುದು..

ಕನಸಿನ ಯಾವ ಪುಟವನು
ಖಾಲಿ ಉಳಿಸದೆ
ಆವರಿಸಿರೋ ನಿನ್ನ ಮುಖಪುಟಕೆ
ಕಲ್ಪನೆಯ ಕುಸರಿಯಲಿ
ನೀಡುತ್ತ ನೂರೆಂಟು ರೂಪ
ನಿನಗಾಗೆ ಕಾಯುತ ಕುಳಿತಿರೋ
ಈ ಪಾಪಿ ಹುಡುಗಿಯ ತೋಯ್ದಾಟ
ತಿಳಿಯದೆ ನಿನ್ನ ಹೃದಯಕೆ...

---ರಾಮೇನಹಳ್ಳಿ ಜಗನ್ನಾಥ

Sunday, July 14, 2013

ಮನವಿ...

ಗೆಳತಿ,
ನನ್ನ ಒಲವ ಮನ್ನಿಸದ ನೀನು
ನಡು ರಾತ್ರಿಯ ನಿದ್ರೆಯಲಿ
ಕನಸಾಗಿ ಬಂದು
ಕಣ್ಣೆದುರು ನಿಂತು
ನೀ ನೀಡಿದಾಗ
ನನ್ನ ಒಲವಿಗೆ ಸಮ್ಮತಿ
ಊಹಿಸು ನನ್ನಯ ಪರಿಸ್ಥಿತಿ..!
ಕನಸಾಗಿ ಬಂದು
ಖುಷಿಯ ತಂದಿತ್ತ ಈ ಗಳಿಗೆ
ಉಳಿದು ಬಿಡಲಿ ಹಾಗೆ ಕಣ್ತುಂಬ
ಶಾಶ್ವತ ನಿದ್ರೆ ಆವರಿಸುತ...

------ರಾಮೇನಹಳ್ಳಿ ಜಗನ್ನಾಥ

ಗೆಳತಿ,
ನಿನ್ನದೊಂದು ಕಣ್ಣಾ ಹನಿಗು
ತೋಯುವ ನಾನೇ
ನಿನ್ನ ಕಣ್ಣ ರೆಪ್ಪೆಗಳಾಗಿರುವಾಗ
ಏತಕೆ ಕಣ್ಣೀರು..
ಇನ್ನೆಂದು ಬಾರದಿರಲಿ
ಇರುವಾಗ ಜೊತೆಯಲ್ಲಿ ನಾನು...

..ರಾಮೇನಹಳ್ಳಿ ಜಗನ್ನಾಥ

Friday, May 17, 2013

ನೆನೆಪೆಂಬ ಸೋನೆ...

ನಿನ್ನ ನೆನಪೆಂಬ ಸೋನೆಗೆ 

ಸದಾ ತೇವಗೊಂಡಿಹ
ಈ ಪ್ರೇಮಿ ಮನಸು
ಕಾಯುತಿಹುದು  ಸದಾ
 ನೀ ಎಂದಾದರೂ
ಬರಬಹುದು ಎಂದು..

ಎದೆಗೂಡ ಜೋಪಡಿಯಲಿ
ಬಚ್ಚಿಟ್ಟ ಕನಸ
ನೆನೆಯೋದೆ ಸೊಗಸು
ಈ ಅಲೆಮಾರಿಗೆ..

ಮಳೆಮೋಡ ನೋವಿನಲಿ ಸುರಿಸಿದ
ನಾಲ್ಕು ಹನಿಯಂತಲ್ಲ.
ಪ್ರತಿಕ್ಷಣವು ಸುರಿಸಿಹುದು
ಕಣ್ಣೀರು..
ಈ ಅಲೆಮಾರಿ ಎದೆಗೂಡು...

ಕೊನೆಗೊಳ್ಳುವ ಮುನ್ನ
ಈ ಅಲೆಮಾರಿ ಬದುಕು
ಕಣ್ಮುಂದೆ ಬಾರೆ
ಕಡೆಗೊಂದು ಬಾರಿ
ಕಣ್ತುಂಬಿಕೊಂಡು ಖುಷಿಯಾಗುವೆ..

-----ರಾಮೇನಹಳ್ಳಿ ಜಗನ್ನಾಥ