Wednesday, December 5, 2012

ಆಕೆ..?

ಆಕೆ..?

ಸಿಗುತಿಲ್ಲ ಎಷ್ಟು ಹುಡುಕಿದರು
ಕನಸಲಿ ಕಂಡ ಆಕೆಯ ವಿಳಾಸ..
ಇಂದಿಗೂ ಕನಸಲಿ ಕಂಡ
ಆಕೆಯ ನಗು ದನಿಗುಡುತ್ತಲೆ ಇದೆ.
ಸದಾ ಕಾಡುತ್ತಲೆ ಇದೆ.

ಕನಸ ವಿವರಣೆ ನೀಡುವೆ ಹುಡುಕಿಕೊಡುವಿರಾ..?
ಸಿಕ್ಕರೆ ನಿಮಗ್ಯಾರಿಗಾದರೂ
ನನ್ನ ತಳಮಳ ತಿಳಿಸಿ
ಕಳಿಸಿಕೊಡುವಿರಾ ನನ್ಮ ಬಳಿ..

ಎಷ್ಟು ದಿನವಾದರೂ ಸಿಗಲೇ ಇಲ್ಲ
ಕೇಳಿಕೊಂಡವರ್ಯಾರೂ ಕಳುಹಿಸಲೇ ಇಲ್ಲ...
ಎಷ್ಟಾದರೂ ಇದು ಹೇಳಿ-ಕೇಳಿ
ವಯಕ್ತಿಕ ಪ್ರಪಂಚ..
ಕೇಳಿಸಿಕೊಳ್ಳುವ ಕಿವಿಗಳೇ ಇಲ್ಲದಿರುವಾಗ
ಹೇಳಿಯಾದರೂ ಏನು ಪ್ರಯೋಜನ..?

ಆಗೊಮ್ಮೆ -ಇಗೊಮ್ಮೆ
ಕಾಡುತ್ತಲೇ ಉಳಿದಿದ್ದ ಆಕೆ ಯಾರೆಂದು
ಈ ಬಾರಿ ಊರಿಗೆ ಹೋದಾಗ
ಗೋಡೆ ಮೇಲಿನ ಫೋಟೊದ ಚಿತ್ರವ
ತದೇಕಚಿತ್ತದಿ ನೋಡುತ್ತಿದ್ದಾಗಲೇ ತಿಳಿದದ್ದು
ಆ ನಗು ನನ್ನಮ್ಮನದು ಎಂದು..

ಇದ್ದಾಗ ಒಂದಿಷ್ಟು ಸಣ್ಣ ನಗುವ
ಅವಳ ಮೊಗದಲ್ಲಿ ನೋಡಲೇ ಇಲ್ಲ..
ನಗುವ ತರಿಸೋ ಪ್ರಯತ್ನವ ಮಾಡಲೇ ಇಲ್ಲ ನಾನು...
ಬರಿ ದುಡಿದೆ ದುಡಿದೆ ದೂರವಾಗಿ ಹೋದಳು...


ಆತ್ಮೀಯವಾಗಿ..
ಜಗನ್ನಾಥ ಆರ್.ಎನ್