Thursday, August 4, 2016

ಕಾಲ ಗರ್ಭದಲಿ...

ಊರ ತೊರೆದ ಮಗನ
ಕಡೆವರೆಗೂ ಅದೇ ಪ್ರೀತಿಯಲಿ
ಕಾಯೋ ಕಣ್ಣು ಅಮ್ಮನದು..
ತೊರೆದ ಮಗನ ಹಿತವ ಬಯಸಿ
ನೂರಾರು ದೇವರುಗಳ ಹರಕೆ
ತೀರಿಸುತಲೇ, ಸಾಗುತಿರುವ ಬದುಕು ಅವಳದು..
ಆದರೂ ಇದ ಅರಿಯದ ಮಗ ಸಾಗುತಿರುವನೋ
ಅರಿತು ಕೂಡ ಮರೆತು ಸಾಗುತಿಹನೊ
ತಿಳಿಯದು ಬದುಕಲಿ..

ಸಿಗದ  ಒಲವ  ಇನ್ನೆಲ್ಲೋ
ಕಾಣುವ ಜಿಜ್ಞಾಸೆ ಪ್ರತಿ ಪ್ರೇಮಿಗಳದ್ದು..
ತೊರೆದ ಕ್ಷಣಕೆ ಏನೇನೋ ಕಾರಣ
ತಾವೆ ಕಟ್ಟಿಕೊಳ್ಳುತ ,ಎಂದಿಗೂ
ದೂಷಿಸದ ಪ್ರೇಮ ಇವರದು..
ಆದರೂ, ಇದ ಅರಿಯದೆ
ಹುಡುಗಿ ಕಳೆದುಕೊಂಡಳೊ,.?
ಸಿಗದ ಹುಡುಗ ಕಳೆದುಕೊಂಡನೊ,
ಒಟ್ಟಾರೆ ಸಿಗದಿದ್ದೆ ಜಾಸ್ತಿ ಬದುಕಲಿ...

ಏನೆನೋ ಹುಡುಕುವ
ಏನೆನೋ ಪಡೆದುಕೊಳ್ಳುವ ಧಾವಂತದಿ
ಕಳೆದುಕೊಳ್ಳುತಲೇ ಸಾಗುವ
ಏನೋ ಪಡೆದವೆಂದು ಹಿಗ್ಗುವ
ಲೆಕ್ಕಾಚಾರದ ಬದುಕಿಗೆ
ತಿಳಿಯದು ಸಾಗುವ ಹಾದಿಯಲಿ
ಕಳೆದುಕೊಂಡುದರ ಲೆಕ್ಕ...

ಇಳಿ ಸಂಜೆಯಲಿ ಕೂತು
ಕಳೆದುಕೊಂಡ  ಒಲವಿನ ಅವಲೋಕನ..
ಗೋಡೆ ಮೇಲಿನ ಅಮ್ಮನ ಫೋಟೋ ನೋಡಿ
ಅವಳ ಬದುಕ ಸ್ಮರಿಸುವ  ಆತ್ಮಾವಲೋಕನ
ಎರಡು ಶೂನ್ಯ ಕಾಲ ಗರ್ಭದಲಿ....


......ರಾಮೇನಹಳ್ಳಿ ಜಗನ್ನಾಥ

Tuesday, June 28, 2016

ನೆನಪೆ ಆಗುವುದಿಲ್ಲ..?!

ಹೆಂಡತಿಯ ಕಾಲಿಗೆ ಶೀತವೆಂದು
ಬೇರೆ ಚಪ್ಪಲಿಯ ಕೊಡಿಸುವ ನಮಗೆ
ಅಪ್ಪನ ಬರಿಗಾಲಿಗೆ ಚುಚ್ಚಿದ ಮುಳ್ಳು
ನೆನಪೆ ಆಗುವುದಿಲ್ಲ...

ತಮ್ಮ ವಿವಾಹ ಮಹೋತ್ಸವಕೆ
ಚಿನ್ನದ ಉಡುಗರೆ ಹೆಂಡತಿಗೆ
ಕೊಡುವಾಗಲೂ, ಅಮ್ಮನ ಕರಿಮಣಿ ಸರ
ನೆನಪೆ ಆಗುವುದಿಲ್ಲ...

ಸಮಯಕ್ಕೆ ಸರಿಯಾಗಿ ಹೋಗದಿದ್ದರೆ
ಹೆಂಡತಿ ಒಬ್ಬಳೆ ಮನೆಯಲಿ ಇರುವಳು
ಎಂದು ಮರುಗುವ ನಮಗೆ
ಅಮ್ಮ ಒಬ್ಬಳೆ ಕಾದ ದಿನಗಳ್ಯಾವು
ನೆನಪೆ ಆಗುವುದಿಲ್ಲ...

ಸ್ನೇಹಿತರಿಗೆ, ಪಕ್ಕದ ಮನೆಯವರಿಗೆ
ಹೀಗೆ ಎಲ್ಲರಿಗೂ ಏನೆಲ್ಲ ಉಡುಗರೆ
ಕೊಡುವ ನಮಗೆ..
"ಏನೆಲ್ಲ ಕೊಡಿಸುವವೆಂದು"
ಚಿಕ್ಕಂದಿನಲ್ಲಿ ಆಡಿದ ಮಾತುಗಳು ನಮಗೆ
ನೆನಪೆ ಆಗುವುದಿಲ್ಲ...
ಆದರೆ,
ಅದೆ ಮಾತನ್ನು ಇಂದಿಗೂ
ನೆನೆ-ನೆನೆದು ಖುಷಿ ಪಡುವುದ
ಅಮ್ಮ ಬಿಡುವುದೇ ಇಲ್ಲ...

-----ರಾಮೇನಹಳ್ಳಿ ಜಗನ್ನಾಥ

Thursday, March 12, 2015

ಜೊತೆಗಿದ್ದ ಜೀವ ಜೇನು...
ನನ್ನೊಳು ಕರಗಿದ ಭಾವ ನೀನು..
ಬರೆಯಲಾರದ ಕವಿತೆ
ಮರೆಯಲಾರದ ಚರಿತೆ
ಆಗಿ ಹೋದೆಯೇನು..?

...ರಾಮೇನಹಳ್ಳಿ ಜಗನ್ಮೂ ರ್ತಿ 

Saturday, August 9, 2014

ಮಡಿಲು...

ಕವಿತೆ ಹುಟ್ಟುವ
ಪ್ರತಿ ಸಮಯದಲೂ
ನಿನ್ನ ನೆನಪಿನ ಆಣಿಕಲ್ಲ(ಆಲಿಕಲ್ಲು) ಮಳೆ ಜೋರಿದೆ..
ನೆನಪ ಮೆಟ್ಟಿ ಹೊರ ಬರುವ
ಪ್ರತಿ ಯತ್ನದಲ್ಲೂ ಸೋಲಿದೆ..
ಸೋಲೋ -ಗೆಲುವೋ ತರ್ಕಗಳಿಗೆ
ಇಳಿಯದ ಮನಸಿನ ಜೊತೆಯಾಗಿ
ಶರಾಬಿದೆ...
ಕಟ್ಟಿಗೆಯೇ ಇರದೆ
ಅಲೆಮಾರಿ ಎದೆ ಉರಿಯುತಿದೆ..
ಮತ್ತೆ-ಮತ್ತೆ ಸಾಲು-ಸಾಲು
ಕವಿತೆ ಕಟ್ಟುತಿದೆ..
ಅಲಮಾರಿನ ತುಂಬ ನೀ ಕೊಟ್ಟ
ಉಡುಗೊರೆಯ ಗೊಂಚಲಿದೆ..
ಅದ ನೋಡುತ ಇಡಿ ರಾತ್ರಿ
ಗೀಳಿಟ್ಟ ಅದೆಷ್ಟೋ ದಿನಗಳಿವೆ..
ಇಂತ ಕ್ಷಣಗಳಲಿ ಜೊತೆಯಾಗಿ
ನನ್ನೊಡನೆ ತಾಯಿ ಮಡಿಲಿದೆ...

-----ರಾಮೇನಹಳ್ಳಿ ಜಗನ್ನಾಥ


Monday, April 7, 2014

(ಅ)ರಾಜಕೀಯ...


ಕೈ-ಕಮಲ ತೃಣಮೂಲ
ಹುಡುಕ್ ಬೇಡಿ ಉಳಿದೋರ್ ಮೂಲ
ನೂರಾರು ಪಾರ್ಟಿಗಳು ದೇಶದಗಲ
ಮೇವು ಮೇದೋರ ಬಾಯಲ್ಲು ವೇದಾಂತ
ಹೊರೆ ಹೊತ್ತೋರ ಬಾಯಲ್ಲು ಸಿದ್ಧಾಂತ
ಇನ್ನ ಸಿಟಿ ತುಂಬ ಸ್ಟ್ಯಾಚುಗಳದ್ದೇ ರಾದ್ಧಾಂತ....
ಯೂತ್ ಲೀಡರ್ ಎಂಪವರ್ ಮೆಂಟು
ಅಪ್ಪ-ಮಕ್ಕಳ ಸೆಂಟಿಮೆಂಟು
ಸಂಘದೋರ ಸ್ಟೇಟ್ ಮೆಂಟು
ಉಳಿದೋರ ಸೆಟಲ್ ಮೆಂಟು
ಅಮ್ಮ ಕೂಡ ಪಿ.ಎಮ್ ಕ್ಯಾಂಡಿಡೇಟು..!
ಬ್ಯುಸಿ-ಬ್ಯುಸಿ ಮೋದಿ ಡೇಟು
ಒಟ್ಟಾರೆ ಬರ್ಲಿ ಒಳ್ಳೇ ಗವರ್ನಮೆಂಟು...
2ಜಿ ರಾಜ ರಾಬಟ್ ವಾದ್ರಾ
ಡಿ.ಕೆ ಬ್ರದರ್ಸ್ ರೆಡ್ಡಿ ಬ್ರದರ್ಸ್ ಎಟ್ಸಟ್ರಾ..ಎಟ್ಸಟ್ರಾ..
ನೋಡಿ ನೋಡಿ ಸಾಕಾಗೋಗಿ
ಪೊರಕೆ ಹಿಡಿದ ಕೇಜ್ರಿನೂ ಗೆಲ್ಲಿಸಿದ್ದಾಯ್ತು ಡೆಲ್ಲಿಯಲ್ಲಿ
ಅದ್ರೆ..! ಕ್ರೇಜು ನೋಡಿ ಗೆಲ್ಲುಸ್ ಬಿಟ್ರಲ್ಲ ನಮ್ಮ ಮಂಡ್ಯದಲ್ಲಿ..
ವಸಿ ನೋಡ್ಕಂಡು ವತ್ರಣ್ಣ ಒಳ್ಳೇರ್ಗೇ ಇರೋರಲ್ಲಿ..

---ರಾಮೇನಹಳ್ಳಿ ಜಗನ್ನಾಥ

Friday, March 7, 2014

ಈಕೆ..

ಚಂದದ ರೇಶಿಮೆ ಸೀರೆ
ತೊಳೆಯಲು ಗಿರಾಕಿಗಳು
ಕೊಟ್ಟಾಗ,
ಉಟ್ಟಂತೆ-ತೊಟ್ಟಂತೆ
ಕನಸ ಕಂಡು
ಮತ್ತೆ,
ಗಿರಾಕಿಗಳ ಕೈಗಿಡುವಳು
ಈಕೆ,
ಆಸೆಗಣ್ಣಿನಿಂದ
ಪಕ್ಕದಲ್ಲಿದ್ದ
ತನ್ನ
ಗಂಡನ ನೋಡುತ..

---ರಾಮೇನಹಳ್ಳಿ ಜಗನ್ನಾಥ

Friday, February 28, 2014

ಹಾಳು ಹಾರ್ಟು..

ಹಾಳು ಹಾರ್ಟಲಿ ಲವ್ವಾಗೈತೆ
ಎಣ್ಣೆ ಇಲ್ದೆ ಟೈಟಾಗೈತೆ
ಅವಳ ಲುಕ್ ಲ್ಲಿ ಎನೋ ಫೀಲು ಐತೆ
ಸುಕ್ಕಾ ಕುಡಿದ ಕಕ್ಕು ಐತೆ
ಡೌಟೇ ಇಲ್ದೇ ಬೋಲ್ಡಾಗೈತೆ
ಖಾಲಿ ಹಾರ್ಟು ತುಂಬೋಗೈತೆ
ಗೊತ್ತೇ ಇಲ್ದೇ ಗುಂಡಿಗೆ ಬಿದ್ನ
ಗೊತ್ತೇ ಆಗ್ತಿಲ್ಲ...

---ರಾಮೇನಹಳ್ಳಿ ಜಗನ್ನಾಥ

Thursday, February 27, 2014

ಶಿವ-ಶಿವ


ಸುಮಾರು ಒಂದು ವರ್ಷದ ಹಿಂದೆ ಸುಮ್ಮನೆ  “ಶಿವರಾಜ್ ಕುಮಾರ್ “ ಮನಸಿನಲ್ಲಿಟ್ಟುಕೊಂಡು ಬರೆದ ಸಿನಿ ಗೀತೆ… ಸೆಂಟಿಮೆಂಟು ಸೈಡ್ ಗೆ ಇಟ್ಟು
ಜೋಗಿ  ಸ್ಟೈಲ್ ಲಿ ಕೂದ್ಲ ಬಿಟ್ಟು
ಓಂ ನ ಸ್ಟೈಲ್ ಲಿ ಎಂಟ್ರಿ ಕೊಟ್ಟು
ಕೈಲಿ ಹಿಡಿದ್ರೆ ಲಾಂಗು ಮಚ್ಚು
ಇಲ್ವೇ ಇಲ್ಲ ದೂಸ್ರ ಮಾತು
ಶಿವ-ಶಿವ……                     (ಪಲ್ಲವಿ)

ಏಜು-ಗೀಜು ಮ್ಯಾಟ್ರೇ ಅಲ್ಲ
ಎಂತ ಸ್ಟೆಪ್ಪು ಎಂತ ಲುಕ್ಕು
ಸ್ಟೆಪ್ಪಿಗೊಂದು ಹೊಸ ಕಿಕ್ಕು
ಅಣ್ಣ ಕುಣಿದರೆ ಶಿವಣ್ಣ ಕುಣಿದರೆ
ಕೈಲಿ ಹಿಡಿದ್ರೆ ಲಾಂಗು ಮಚ್ಚು
ಲಾಂಗಿಗೆಂತು ಹೊಸಾ ಗ್ರಿಪ್ಪು
ಅಣ್ಣ ಹಿಡಿದರೆ ಶಿವಣ್ಣ ಹಿಡಿದರೆ
ಶಿವ-ಶಿವ…                        (ಚರಣ 1)

ಎಂಟ್ರಿಯಿಂದ ಇಲ್ಲಿತನಕ
ಪಡ್ಡೆಯಿಂದ ಗೆಡ್ಡೆವರೆಗೂ
ಮೆಚ್ಚಿದಂತ  ನಟನಿವ..
ಎಷ್ಟೆ ಆದ್ರು ಯಾರಿವ..?
ಅಣ್ಣೋರ ಮಗನಿವ..
ಕರುನಾಡಿಗೊಬ್ಬನೇ ಈ ಶಿವ…
ಶಿವ-ಶಿವ..ಪರಮಶಿವ ..            (ಚರಣ 2)

--ರಾಮೇನಹಳ್ಳಿ ಜಗನ್ನಾಥ

Wednesday, February 26, 2014

ಗೆಳತಿ,
ಏನಿದೆ ಈ ಮುಗಿಲಲಿ..
ಏನಿದೆ ಈ ಕಡಲಲಿ..
ಎಲ್ಲಕೂ ಮಿಗಿಲಿದೆ
ನಿನ್ನಾ ಮಡಿಲಲಿ..

..ರಾಮೇನಹಳ್ಳಿ ಜಗನ್ನಾಥ