ಇಲ್ಲಿ ಎಲ್ಲವೂ
ಕಳೆದು ಹೋದ ಮುಖಗಳೇ
ಎನೋ ನೆನೆಯುವವು.
ಯಾಕೋ ನಲಿಯುವವು
ಸುಮ್ಮನೆ ಕುಳಿತು ಕಳೆಯುತ್ತಿದ್ದರೆ ಕಾಲ
ಮಾಲೀಕಳ ಗದರಿಕೆಗೆ ಎಚ್ಚರವಾಗಿ
ಬೀರುವವು ವ್ಯವಹಾರಿಕ
ನಸು-ನಗೆ
ವಿವಿಧ ಬಗೆ
ಬರುವ ಗಿರಾಕಿಗಳಿಗೆ...
ಬಯಲಾಗಿ ಇಟ್ಟಿರುವ ದೇಹಕ್ಕೆ ಸಿಕ್ಕಾಗ ವಿರಾಮ
ಮುಂದುವರೆಯುವುದು ಮಂಥನ
ಮತ್ತದೆ ಪ್ರಶ್ನೆಗಳಿಗೆ
ಇಟ್ಟಿದ್ದ ಕಾಮಾ,
ಗಂಡ, ಮಕ್ಕಳು, ಸಂಸಾರ, ಸಿನಿಮಾ, ಸುತ್ತಾಟ
ಎಲ್ಲವೂ ತನ್ನ ವಾರಿಗೆ ಗೆಳತಿಯರ
ಬದುಕು ನೆನೆದಾಗ
ಲಗ್ಗೆಯಿಡುವ ಪ್ರಶ್ನೆಗಳಿಗೆ ಉತ್ತರವೆಂಬಂತೆ
ಊಹೆ ಕಲ್ಪನೆಯಲ್ಲೇ ನಿರ್ಮಿಸಿಕೊಂಡ
ಕನಿಸಿನ ಬದುಕೊಂದಿಗೆ
ದೂಕುವವು ಕಾಲ ಸದಾ..
ವಾಸ್ತವಕೆ ಕಡಿವಾಣವುಂಟೆ ಎಂಬಂತೆ
ಹೊಳೆದ ಆಕಾಂಕ್ಷೆಗಳಿಗೆ ಬೀಳುವುದು ಪೂರ್ಣವಿರಾಮ
ಬಂದಿರುವ ಗಿರಾಕಿಗಳ ಕೊಡಪಾನ
ತುಂಬಿದಂತ ಆಸೆಗಣ್ಣುಗಳಿಂದ
ಇಷ್ಟೇನಾ ನನ್ನ ಬದುಕು ಎನ್ನುವ
ನಿರ್ವಿಕಾರ ಒಂಟಿ ಪ್ರಶ್ನೆಯೊಂದಿಗೆ...
ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್