Thursday, January 31, 2013

ಪ್ರೇಮ...



ಮರೆಮಾಚಿ ನೋಡುವುದರಿಂದ
ಆರಂಭಗೊಂಡ ಪ್ರೇಮ
ಭಾವ ಬಂಧನದಿಂದ
ಸಿಗುವುದೇ ಈ ಪ್ರೇಮ..
ಬರೆಯೋ ಪ್ರೇಮ ಪತ್ರಗಳ
ಕೊಡಲಾಗದೇ ಹರಿಯುವುದರಿಂದ
ತಿಳಿಯುವುದೇ ಈ ಪ್ರೇಮ..
ಕಣ್ಣ ಹನಿಗಳಿಂದ
ಫಲಿಸುವುದೇ ಈ ಪ್ರೇಮ..
ಮೂಕರಾಗವಾಗಿ ಉಳಿದುಹೋದ
ಎದೆಯ ಹಾವ-ಭಾವ
ತಿಳಿಯೋಲ್ಲ ತಿಳಿದುಕೊಳ್ಳೋಲ್ಲ
ಯಾವುದೇ ಹೆಣ್ಣು ಜೀವ...

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Wednesday, January 30, 2013

ಕೆಂಪು ದೀಪದಲ್ಲೊಂದು ಅಳಲು



ಇಲ್ಲಿ ಎಲ್ಲವೂ
ಕಳೆದು ಹೋದ ಮುಖಗಳೇ
ಎನೋ ನೆನೆಯುವವು.
ಯಾಕೋ ನಲಿಯುವವು
ಸುಮ್ಮನೆ ಕುಳಿತು ಕಳೆಯುತ್ತಿದ್ದರೆ ಕಾಲ
ಮಾಲೀಕಳ ಗದರಿಕೆಗೆ ಎಚ್ಚರವಾಗಿ
ಬೀರುವವು ವ್ಯವಹಾರಿಕ
ನಸು-ನಗೆ
ವಿವಿಧ ಬಗೆ
ಬರುವ ಗಿರಾಕಿಗಳಿಗೆ...

ಬಯಲಾಗಿ ಇಟ್ಟಿರುವ ದೇಹಕ್ಕೆ ಸಿಕ್ಕಾಗ ವಿರಾಮ
ಮುಂದುವರೆಯುವುದು ಮಂಥನ
ಮತ್ತದೆ ಪ್ರಶ್ನೆಗಳಿಗೆ
ಇಟ್ಟಿದ್ದ ಕಾಮಾ,

ಗಂಡ, ಮಕ್ಕಳು, ಸಂಸಾರ, ಸಿನಿಮಾ, ಸುತ್ತಾಟ
ಎಲ್ಲವೂ ತನ್ನ ವಾರಿಗೆ ಗೆಳತಿಯರ
ಬದುಕು ನೆನೆದಾಗ
ಲಗ್ಗೆಯಿಡುವ ಪ್ರಶ್ನೆಗಳಿಗೆ ಉತ್ತರವೆಂಬಂತೆ
ಊಹೆ ಕಲ್ಪನೆಯಲ್ಲೇ ನಿರ್ಮಿಸಿಕೊಂಡ
ಕನಿಸಿನ ಬದುಕೊಂದಿಗೆ
ದೂಕುವವು ಕಾಲ ಸದಾ..

ವಾಸ್ತವಕೆ ಕಡಿವಾಣವುಂಟೆ ಎಂಬಂತೆ
ಹೊಳೆದ ಆಕಾಂಕ್ಷೆಗಳಿಗೆ ಬೀಳುವುದು ಪೂರ್ಣವಿರಾಮ
ಬಂದಿರುವ ಗಿರಾಕಿಗಳ ಕೊಡಪಾನ
ತುಂಬಿದಂತ ಆಸೆಗಣ್ಣುಗಳಿಂದ
ಇಷ್ಟೇನಾ ನನ್ನ ಬದುಕು ಎನ್ನುವ
ನಿರ್ವಿಕಾರ ಒಂಟಿ ಪ್ರಶ್ನೆಯೊಂದಿಗೆ...

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Tuesday, January 29, 2013

ಹನಿ-2




ಮನದಾಳದ ತುಮುಲ
ಒಡಲಾಳದ ಒಲವು
ಕಣ್ಣಂಚಿನ ಕನಸು
ಸೋಲುತ್ತಲೇ ಇರೊಮನಸು
ಗುನುಗೋದು ಕಡೆವರೆಗು
ನಿನದೊಂದೆ ಹೆಸರು...

  ಆತ್ಮೀಯವಾಗಿ,
  ಜಗನ್ನಾಥ. ಆರ್.ಎನ್

ನಮ್ಮೂರು...



ಮದುವೆ ಲಗ್ನದಲ್ಲಿನ ಮೈಕ್ ಸೆಟ್ಟಿನ ಸೌಂಡು..
ಪ್ರತಿ ಸಂಜೆಯ ಊರ ಹೈಕಳ ಸದ್ದು..
ಕಾಣಿಯಾಗಿರೊ ಪಟ್ಟಿ ಸೇರಿವೆ...
ಮೈಕ್ ಸೆಟ್ ಪ್ರತಿ ಶುಭ ಕಾರ್ಯದಲ್ಲೂ ಪ್ರತೀಕದಂತಿತ್ತು...
ಪ್ರತಿ ಸಂಜೆಗಳು ಹೈಕಳ ಸದ್ದಿನಿಂದ ಆವೃತವಾಗುತ್ತಿದ್ದವು...
ಆ ಸದ್ದು ಮಾಯವಾಗಿ  ಸಂಜೆಗೂ ಕೂಡ ನಡು ರಾತ್ರಿಯ
ನೀರವ ಮೌನ ಆವರಿಸಿದೆ..
ಕಾರಣ ,
ಸರಕಾರ ಕೊಟ್ಟರೇನಂತೆ ಬಿಸಿ ಊಟ, ಸೈಕಲ್
ನಮ್ಮೂರ ಹೈಕಳು ಕಲಿಯಲು ಸಿಟಿ ಶಾಲೆಗೆ ಸೇರಿವೆ..
ಇನ್ನ ಅವು ಮನೆ ಸೇರುವುದು ರಾತ್ರಿ ಏಳರ ಊರ ಬಸ್ಸಿಗೆ..
ಅಪ್ಪ ಅಮ್ಮಂದಿರು ಇದನೆ ಬೀಗುತ್ತಿದ್ದಾರೆ ಅವರಿವರ ಮುಂದೆ
ತಮ್ಮ ಮಗು ಒಂದನೇ ತರಗತಿಗೆ ಇಂಗ್ಲೀಷ್ ಶಾಲೆಯಲಿ ಕಲಿಯುತಿರೊ ಕುರಿತು.

ಇನ್ನ ಊರ ಜಗುಲಿಗಳೆಂತು ಬಣಗುಡುತ್ತಿವೆ ಊರ ಯುವಕರಿಲ್ಲದೆ
ಕಾರಣ,
ನಮ್ಮೂರ ಯುವಕರು ಬೆಂಗಳೂರಂತ ನಗರಗಳ ಕ್ಲಬ್ಬು-ಬಾರುಗಳಲ್ಲಿ
ದುಡಿಯುತಿಹರು ಭೂಮಿಯಲಿ ಗೆಯ್ಯಲಾರದೆ...
ಒಟ್ಟಾರೆ ನಮ್ಮೂರಿನಲಿ ಈಗ ಈ ಗಾದೆ ಫೇಮಸ್ಸು
ಬೇಡವೆನಿಸಿದರೆ ಊರು ಸೇರಿ ಬೆಂಗಳೂರ ಬಾರು...

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್


Thursday, January 17, 2013

ಶೂನ್ಯ...



ಬರೆಯುವಾಗಿನ ಲೇಖನಿಯ
ನೆರಳು ಕೂಡ ಅಣಕಿಸುತಿದೆ
ನೀ ಬರೆಯುವುದು
ಅವಳ ಕುರಿತೆ ಎಂದೆ...
ಆ ನೆರಳಿಗೇನು ಗೊತ್ತು ಪಾಪ
ನೀ ನನ್ನ ಸ್ವಾತಿಮುತ್ತು ಎಂದು..

ಎಲ್ಲ ಬೆರಗು ಕಂಗಳಿಂದ
ನೋಡಬಹುದು ನನ್ನ..
ಯಾರೂ ನನ್ನ ಆಂತರ್ಯದಿಂದ
ದೂರ ಮಾಡಲಾರರು ನಿನ್ನ...
ನೀನೂ ಕೂಡ ಅಳಿಸಲಾರೆ
ನನ್ನ ಎದೆಗೂಡಿನಲ್ಲಿನ ನಿನ್ನ ಮುಖಪುಟವ..
ಆವರಿಸಿರುವಾಗ ನಿನ್ನದೆ
ಪ್ರತಿ ಪುಟವ...

ನೀನೇ ನನ್ನ ಒಲವ ಮುಂದೆ
ಸೋತಿರುವಾಗ..
ಗೆಲ್ಲುವರ್ಯಾರು ಇನ್ನ ನನ್ನ ಮುಂದೆ..
ಕನಸು ಕೂಡ ಸೋತಿರುವಾಗ
ಬೇರೆ ಕನಸಿಗೆ ಜಾಗ ನೀಡಲು..
ಮನಸೇ ಮುಡಿಪಾಗಿರುವಾಗ
ನಾನೆಂದು ನಿನಗೆ ಎನಲು
ಜಗವೆಲ್ಲ ಶೂನ್ಯ ..

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್

Wednesday, January 16, 2013

ಹೆಣ್ಮಕ್ಲು



ಏನೋ ಗೀಚಲು ಹೋಗಿ ಹಾಗೆ ಸುಮ್ಮನೆ ಮೂಡಿದ ಒಂದಿಷ್ಟು ಸಾಲುಗಳು
ಸಾಲುಗಳನ್ನು "ಪರಮಾತ್ಮ" ಚಿತ್ರದ "ಕತ್ಲೇಲಿ ಕರಡೀನ" ಹಾಡಿನ ದಾಟಿಯಲ್ಲಿ ಓದಿಕೊಳ್ಳಿ ..


ಸಾಕಪ್ಪ ಸಹವಾಸ ಈ ಹೆಣ್ಮಕ್ಲುದು..
ಹಾರ್ಟಲ್ಲಿ ಮಾಡ್ಬಿಟ್ಟು ಹೊರಟೋದ್ಲು
ಬಹು ದೊಡ್ಡ ಹೋಲು..
ಇದ ಮುಚ್ಹೊದ್ರಲ್ಲೇ ಕಳಿಬೇಕು
ಹಾಳು ಬಾಳು....  (ಪಲ್ಲವಿ)
ಸಾಕಪ್ಪ ಸಹವಾಸ ಹೆಣ್ಮಕ್ಲುದು..

(ಚರಣ..1)

ಫ್ಲ್ಯಾಷಬ್ಯಾಕು ನೆನಸ್ಬೇಡಿ
ಹೇಗಾಯ್ತೋ ಕಾಣೆ ..ಹೆಂಗಯ್ತೋ ಕಾಣೆ..
ಒಟ್ನಲ್ಲಿ ಲವ್ವಾಯ್ತು ನನ್ನಾಣೆ...
ಕೊಟ್ಟಿದ್ದು ಎಷ್ಟೋ ..ಕಳೆದದ್ದು ಎಷ್ಟೋ ..
ಸಿಗುತ್ತಿಲ್ಲ ಯಾವ್ದಕ್ಕು ಲೆಕ್ಕ..
ಎಷ್ಟಾದ್ರೂ ಲವ್ವು 420 ಪಕ್ಕ..
ಸಾಕಪ್ಪ ಸಹವಾಸ ಹೆಣ್ಮಕ್ಲುದು..

(ಚರಣ..2)
ಪಾರ್ಟಿ ಪಾರ್ಟಿ ಗಾಳಿ ಬೀಸ್ದಂಗೆ ಕಾಣ್ಸುತ್ತೆ
ಕುರ್ಚಿನ ಬಿಟ್ರುನು ಬಿಡದಂಗೆ ಕುತೀರೋ ನಮ್ಮ ಸಿ.ಎಮ್ಮು
ಒಟ್ನಲ್ಲಿ ಹಾಗೇನೆ ನಮ್ ಹಾರ್ಟ್ ಅಲ್ಲಿ
ಕೂತೊರೆ ನಮ್ಮ ಮೇಡಮ್ಮು ..
ಸಾಕಪ್ಪ ಸಹವಾಸ ಹೆಣ್ಮಕ್ಲುದು ..
ಬಿಟ್ಬುಡಿ ಬಿಡ್ಕೊಬೇಕು ವಸಿ ರಮ್ಮು..


ಆತ್ಮೀಯವಾಗಿ..
ಜಗನ್ನಾಥ ಆರ್.ಎನ್


ಮೊದಲ ರಾತ್ರಿ..


ಭಾರವೆನಿಸುತಿವೆ ಅವನ ಕೈಗಳು
ಅನುಮಾನ ಪಡುವಂತಾಗುತ್ತಿದೆ
ಅವನ ಸಂಭಾಷಣೆಗಳು..
ಇದು ಹೊಸತು ಅದು ಹಳತು
ಎಂದು ತಾಳೆ ಹಾಕುತಿರುವ
ಮನಸು  ತಿರುವಿ ಹಾಕುತಿದೆ
ಹಳೆಯ ಪುಟಗಳನು...

ಇವನ ಆಕ್ರಮಣ ಅತಿಕ್ರಮಣ
ಹೊಸತೆನಿಸಿದೆ ಮತ್ತು ಹೊಲಸೆನಿಸಿದೆ.
ಕೇವಲ ಮುತ್ತಿಗಾಗಿ
ಅವನು ಪಟ್ಟ ಪ್ರಯತ್ನವೆಷ್ಟು..? ಎಂದು
ತಾಳೆಹಾಕುತಿದೆ ಅವಳ ಮನಸು
ಹಳೆಯ ಹುಡುಗನೊಂದಿಗೆ..
ಕೋರಿಕೆ ಇರದ ಗೂಳಿಯಂತ ದಾಳಿ ಇವನದು
ಕಾಣಿಕೆಯಾಗಿ ಕೇಳಿಕೊಳ್ಳುತ್ತಿದ್ದ ಪಾಳಿ ಅವನದು..

ಗೆಳೆತನ, ಪ್ರೀತಿ ಮದುವೆ ಇವೆಲ್ಲವುಗಳ
ಮೂಲ ಉದ್ದೇಶ ಇದೊಂದೆ ಅಲ್ಲವೇ..?
ಎಂದು ಪ್ರಶ್ನಿಸುತಿರೋ ಇವಳು
ಎಂದೂ ಅವನಿಗೆ ಒಪ್ಪದೆ
ಇವನಿಗೆ ಚಾಚೂ ತಪ್ಪದೆ ಒಪ್ಪಿದೆ
ಮನ ನಿರಾಕರಿಸಲು ಸೋಲೊಪ್ಪಿದೆ
ನಿಜ ಜೀವನ ಇದೆ ಎಂದೆನಿಸಿದರೂ
ಇದು ಹೊಲಸು..

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್