Monday, March 4, 2013

ಗುಳಿಗೆನ್ನೆ ಹುಡುಗಿಗೊಂದು ಪತ್ರ...

ಪ್ರಿಯ ಸಖಿ,
ಸೌಖ್ಯವೇ...?
ಇಲ್ಲಿ ಮಳೆಗಾಲ ತರುತಿದೆ
ಮತ್ತೆ-ಮತ್ತೆ ಹೊತ್ತು ನಿನ್ನ ನೆನಪ..
ಮುಂಜಾನೆಯ ರವಿ ಕೂಡ ಕದ ತಟ್ಟಿಹ
ಬಲು ತಡವಾಗಿ..
ಇನ್ನ ಬೀಳೋ ಕನಸುಗಳು ಬರಿ
ನಿನ್ನ ನೆನಪಿನ ಮೂಟೆ ಹೊತ್ತು ತಂದಿವೆ..
ಕನಸೆಂದರೇ ಏನು, ಬರಿ ಭವಿಷ್ಯವಾ..?

ಯಾವುದರ ಹಂಗಿಲ್ಲ
ನಿನ್ನ ನೆನಪಿನ ಗುಂಗಲ್ಲಿ..
ನೀ ನನಗಿಟ್ಟ ಆ ಮೊದಲ
ಪತ್ರ ಹೊಮ್ಮಿಸಿದೆ
ನೆನಪಿನ ನಾದವ ತನ್ನ ನಾಭಿಯಿಂದ...

ಗುಳಿಗೆನ್ನೆ ಹುಡುಗಿ ನೀನು,
ನಿನ್ನ ಆ ನಗು ಕಾಡುತ್ತಿದೆ ಸದಾ..
ವಾಸ್ತವ ಏನ ಬೇಡುತ್ತಿದೆಯೋ
ತಿಳಿಯದು...
ಮತ್ತೆ-ಮತ್ತೆ ಒಲವಾಗುತ
ಪದೇ-ಪದೆ ಮನಸೇಕೋ
ನೆನಪಿಗೆ ಜಾರಿಹಿದು..

ಕಡಲ ದಡದಲ್ಲೂ
ಮುಗಿಲ ಮೊರೆಯಲ್ಲೂ
ಏಕಾಂತದ ಸುಳಿ
ಒಳ ಹೊಕ್ಕಿರುವ ಆ ಗುಳಿ
ಸುಡುತಿಹುದು
ಈ ಚಳಿಗಾಲದಲ್ಲೂ...

ಒಡಲ ಒಳದನಿ
ಸುರಿಸೋ ಕಂಬನಿ
ಒರೆಸಲು ಯಾರಿಲ್ಲದ
ಈ ಅಲೆಮಾರಿ ದನಿ
ಎಂದೂ ಅನಾಥ
ಎಂದಿನಂತೆ...

ಇಂತಿ..
ನಿನ್ನ ಸಖ..


ಆತ್ಮೀಯವಾಗಿ,
ಜಗನ್ನಾಥ ಆರ್.ಎನ್