Thursday, August 8, 2013

ಬರಬಾರದ ಮತ್ತೆ..

ಕೊರಗುತ್ತಲೇ ಇದ್ದಾಳೆ
ಕನಲುತ್ತಲೇ ಇದ್ದಾಳೆ
ಅವಳು ಅಂದಿನಿಂದಲೂ
ಅವ ಯಾರೋ ಏನೋ ಒಮ್ಮೆಯೂ
ಎಲ್ಲಿಯೂ ಕಂಡವನಲ್ಲ ಎಂದೂ
ಮೊದ-ಮೊದಲು ಮಾಮೂಲಿಯಂತೆ
ಇದ್ದವಳು..

ಕ್ಷಣದಲ್ಲೇ..!
ತನು-ಮನವ ಮನಃಪೂರ್ತಿ
ಒಪ್ಪಿಸಿಕೊಂಡಳು
ಅವನು ಬಂದಾಗ ಅಂದು.
ವಿಧುರನೋ ವಿಲಾಸಿಯೋ ಕಾಣೆ
ಒಟ್ಟಾರೆ ಬಂದವ ಅಂದು
ಇಂದಿಗೂ ಈ ಬೀದಿಗೆ ನಾಪತ್ತೆ
ಅಂದಿನಿಂದಲೂ ಬಂದವರೆಷ್ಟೋ
ಹೋದವರೆಷ್ಟೋ ಇವನಂತಹ
ಗಿರಾಕಿಗಳು ಮತ್ತೆ-ಮತ್ತೆ

ಆದರೆ,
ಅವನೇಕೆ ಹಾಗೆ.?
ಮನದಲ್ಲಿ ಉಳಿದುಕೊಂಡಿಹನು
ಎಂದುಕೊಡಿರುವಿರಾ ನೀವು

ಈ ಪ್ರೀತಿ ಹೆಸರಲ್ಲಿ ಉಳಿಸಿಹನಲ್ಲ
ನನ್ನವನೊಬ್ಬ ಇಂದಿಗೂ ನೋವು
ಅವನಂತಯೇ ಕಂಡಿದ್ದ ಆತ
ಕ್ಷಣಿಕದಲ್ಲೇ ಹಳೆತಲ್ಲ ಮರತೆ
ಅವನಲ್ಲಿ ಬೆರೆತೆ..

ನಂತರದಿ ನೆನಪಾದಾಗ ವಾಸ್ತವ
ನಿದ್ದೆ ಮಂಪರಿನಲ್ಲಿ
ನಾ ಎದ್ದು ನೋಡುವಷ್ಟರಲ್ಲಿ
ಅವನಾಗಿದ್ದ ಮರೆ ಮತ್ತೆ ಹೆಚ್ಚಿಸಿ
ನನ್ನ ನೋವಿನ ಹೊರೆ..

ಅದೇಕೋ,
ಎಂದೂ ಯಾರೂ ನೀಡದಷ್ಟು ಗರಿ-ಗರಿ ನೋಟುಗಳು
ತಲೆದಿಂಬಿನಡಿಯಲ್ಲಿ ಇಣಕಿ ನೋಡುತ್ತಿದ್ದವು
ಇಷ್ಟೇ-ಇಷ್ಟೇ ನಿನ್ನ ಬೆಲೆಯೆಂದು..!

ಅವನಾಗಿದ್ದರೆ ನನ್ನ ಕಂಡಾಗ
ಗುರುತು ಸಿಕ್ಕಿತೋ ಇಲ್ಲ
ಗುರುತು ಸಿಕ್ಕಿಯೂ ಸಿಕ್ಕದವನಂತೆ
ನಟಿಸಿದನೋ..

ಅದೆಲ್ಲಿ ಅರ್ಥವಾಗಬೇಕು ಹೇಳಿ
ಬಂದವರೆಲ್ಲಾ ನನ್ನ ಬಗ್ಗೆ ವಿಚಾರಿಸುತ್ತಾರೆಯೇ..?
ನಾ ಅವರನ್ನು ಅರಿಯಲು.
ಬಂದವರು ತಮ್ಮ-ತಮ್ಮ ಇಷ್ಟಾರ್ಥಗಳ
ಹೊಂದುವ ಬಯಕೆಯಲಿ
ತೋರುವರು ಆತುರ ಅಲ್ಲವೇ..?

ಇರಲಿರಲಿ ಬಿಡಿ
ಬರುವ ಗಿರಾಕಿಗಳ ಬಗ್ಗೆಯೇಕೆ ಕೊಂಕುಮಾತು
ಆದರೂ ಅವನ್ಯಾರು
ಒಮ್ಮೆಯಾದರೂ ಹಿಂದುರಿಗಿ ಬರಬಾರದೇ
ಈ ಬೀದಿಗೆ ಮತ್ತೆ..

--------ರಾಮೇನಹಳ್ಲಿ ಜಗನ್ನಾಥ
ಕಲೆ--ಲಕ್ಷ್ಮಣ ಕಲ್ಯಾಣಿ
(ಈ ಕವನ ಸುಮಾರು 8 ವರ್ಷಗಳ ಹಿಂದೆ ಬರೆದದ್ದು..)



1 comment:

Badarinath Palavalli said...

ಆಕೆಯ ದುಖಾತಪ್ತ ಮನಸ್ಸಿಗೆ ಇಯಲ್ಲವೇ ಸೂಚನೆ: ವಿಧುರನೋ ವಿಲಾಸಿಯೋ