Thursday, August 4, 2016

ಕಾಲ ಗರ್ಭದಲಿ...

ಊರ ತೊರೆದ ಮಗನ
ಕಡೆವರೆಗೂ ಅದೇ ಪ್ರೀತಿಯಲಿ
ಕಾಯೋ ಕಣ್ಣು ಅಮ್ಮನದು..
ತೊರೆದ ಮಗನ ಹಿತವ ಬಯಸಿ
ನೂರಾರು ದೇವರುಗಳ ಹರಕೆ
ತೀರಿಸುತಲೇ, ಸಾಗುತಿರುವ ಬದುಕು ಅವಳದು..
ಆದರೂ ಇದ ಅರಿಯದ ಮಗ ಸಾಗುತಿರುವನೋ
ಅರಿತು ಕೂಡ ಮರೆತು ಸಾಗುತಿಹನೊ
ತಿಳಿಯದು ಬದುಕಲಿ..

ಸಿಗದ  ಒಲವ  ಇನ್ನೆಲ್ಲೋ
ಕಾಣುವ ಜಿಜ್ಞಾಸೆ ಪ್ರತಿ ಪ್ರೇಮಿಗಳದ್ದು..
ತೊರೆದ ಕ್ಷಣಕೆ ಏನೇನೋ ಕಾರಣ
ತಾವೆ ಕಟ್ಟಿಕೊಳ್ಳುತ ,ಎಂದಿಗೂ
ದೂಷಿಸದ ಪ್ರೇಮ ಇವರದು..
ಆದರೂ, ಇದ ಅರಿಯದೆ
ಹುಡುಗಿ ಕಳೆದುಕೊಂಡಳೊ,.?
ಸಿಗದ ಹುಡುಗ ಕಳೆದುಕೊಂಡನೊ,
ಒಟ್ಟಾರೆ ಸಿಗದಿದ್ದೆ ಜಾಸ್ತಿ ಬದುಕಲಿ...

ಏನೆನೋ ಹುಡುಕುವ
ಏನೆನೋ ಪಡೆದುಕೊಳ್ಳುವ ಧಾವಂತದಿ
ಕಳೆದುಕೊಳ್ಳುತಲೇ ಸಾಗುವ
ಏನೋ ಪಡೆದವೆಂದು ಹಿಗ್ಗುವ
ಲೆಕ್ಕಾಚಾರದ ಬದುಕಿಗೆ
ತಿಳಿಯದು ಸಾಗುವ ಹಾದಿಯಲಿ
ಕಳೆದುಕೊಂಡುದರ ಲೆಕ್ಕ...

ಇಳಿ ಸಂಜೆಯಲಿ ಕೂತು
ಕಳೆದುಕೊಂಡ  ಒಲವಿನ ಅವಲೋಕನ..
ಗೋಡೆ ಮೇಲಿನ ಅಮ್ಮನ ಫೋಟೋ ನೋಡಿ
ಅವಳ ಬದುಕ ಸ್ಮರಿಸುವ  ಆತ್ಮಾವಲೋಕನ
ಎರಡು ಶೂನ್ಯ ಕಾಲ ಗರ್ಭದಲಿ....


......ರಾಮೇನಹಳ್ಳಿ ಜಗನ್ನಾಥ

Tuesday, June 28, 2016

ನೆನಪೆ ಆಗುವುದಿಲ್ಲ..?!

ಹೆಂಡತಿಯ ಕಾಲಿಗೆ ಶೀತವೆಂದು
ಬೇರೆ ಚಪ್ಪಲಿಯ ಕೊಡಿಸುವ ನಮಗೆ
ಅಪ್ಪನ ಬರಿಗಾಲಿಗೆ ಚುಚ್ಚಿದ ಮುಳ್ಳು
ನೆನಪೆ ಆಗುವುದಿಲ್ಲ...

ತಮ್ಮ ವಿವಾಹ ಮಹೋತ್ಸವಕೆ
ಚಿನ್ನದ ಉಡುಗರೆ ಹೆಂಡತಿಗೆ
ಕೊಡುವಾಗಲೂ, ಅಮ್ಮನ ಕರಿಮಣಿ ಸರ
ನೆನಪೆ ಆಗುವುದಿಲ್ಲ...

ಸಮಯಕ್ಕೆ ಸರಿಯಾಗಿ ಹೋಗದಿದ್ದರೆ
ಹೆಂಡತಿ ಒಬ್ಬಳೆ ಮನೆಯಲಿ ಇರುವಳು
ಎಂದು ಮರುಗುವ ನಮಗೆ
ಅಮ್ಮ ಒಬ್ಬಳೆ ಕಾದ ದಿನಗಳ್ಯಾವು
ನೆನಪೆ ಆಗುವುದಿಲ್ಲ...

ಸ್ನೇಹಿತರಿಗೆ, ಪಕ್ಕದ ಮನೆಯವರಿಗೆ
ಹೀಗೆ ಎಲ್ಲರಿಗೂ ಏನೆಲ್ಲ ಉಡುಗರೆ
ಕೊಡುವ ನಮಗೆ..
"ಏನೆಲ್ಲ ಕೊಡಿಸುವವೆಂದು"
ಚಿಕ್ಕಂದಿನಲ್ಲಿ ಆಡಿದ ಮಾತುಗಳು ನಮಗೆ
ನೆನಪೆ ಆಗುವುದಿಲ್ಲ...
ಆದರೆ,
ಅದೆ ಮಾತನ್ನು ಇಂದಿಗೂ
ನೆನೆ-ನೆನೆದು ಖುಷಿ ಪಡುವುದ
ಅಮ್ಮ ಬಿಡುವುದೇ ಇಲ್ಲ...

-----ರಾಮೇನಹಳ್ಳಿ ಜಗನ್ನಾಥ