Thursday, August 4, 2016

ಕಾಲ ಗರ್ಭದಲಿ...

ಊರ ತೊರೆದ ಮಗನ
ಕಡೆವರೆಗೂ ಅದೇ ಪ್ರೀತಿಯಲಿ
ಕಾಯೋ ಕಣ್ಣು ಅಮ್ಮನದು..
ತೊರೆದ ಮಗನ ಹಿತವ ಬಯಸಿ
ನೂರಾರು ದೇವರುಗಳ ಹರಕೆ
ತೀರಿಸುತಲೇ, ಸಾಗುತಿರುವ ಬದುಕು ಅವಳದು..
ಆದರೂ ಇದ ಅರಿಯದ ಮಗ ಸಾಗುತಿರುವನೋ
ಅರಿತು ಕೂಡ ಮರೆತು ಸಾಗುತಿಹನೊ
ತಿಳಿಯದು ಬದುಕಲಿ..

ಸಿಗದ  ಒಲವ  ಇನ್ನೆಲ್ಲೋ
ಕಾಣುವ ಜಿಜ್ಞಾಸೆ ಪ್ರತಿ ಪ್ರೇಮಿಗಳದ್ದು..
ತೊರೆದ ಕ್ಷಣಕೆ ಏನೇನೋ ಕಾರಣ
ತಾವೆ ಕಟ್ಟಿಕೊಳ್ಳುತ ,ಎಂದಿಗೂ
ದೂಷಿಸದ ಪ್ರೇಮ ಇವರದು..
ಆದರೂ, ಇದ ಅರಿಯದೆ
ಹುಡುಗಿ ಕಳೆದುಕೊಂಡಳೊ,.?
ಸಿಗದ ಹುಡುಗ ಕಳೆದುಕೊಂಡನೊ,
ಒಟ್ಟಾರೆ ಸಿಗದಿದ್ದೆ ಜಾಸ್ತಿ ಬದುಕಲಿ...

ಏನೆನೋ ಹುಡುಕುವ
ಏನೆನೋ ಪಡೆದುಕೊಳ್ಳುವ ಧಾವಂತದಿ
ಕಳೆದುಕೊಳ್ಳುತಲೇ ಸಾಗುವ
ಏನೋ ಪಡೆದವೆಂದು ಹಿಗ್ಗುವ
ಲೆಕ್ಕಾಚಾರದ ಬದುಕಿಗೆ
ತಿಳಿಯದು ಸಾಗುವ ಹಾದಿಯಲಿ
ಕಳೆದುಕೊಂಡುದರ ಲೆಕ್ಕ...

ಇಳಿ ಸಂಜೆಯಲಿ ಕೂತು
ಕಳೆದುಕೊಂಡ  ಒಲವಿನ ಅವಲೋಕನ..
ಗೋಡೆ ಮೇಲಿನ ಅಮ್ಮನ ಫೋಟೋ ನೋಡಿ
ಅವಳ ಬದುಕ ಸ್ಮರಿಸುವ  ಆತ್ಮಾವಲೋಕನ
ಎರಡು ಶೂನ್ಯ ಕಾಲ ಗರ್ಭದಲಿ....


......ರಾಮೇನಹಳ್ಳಿ ಜಗನ್ನಾಥ

No comments: